Coastal Bulletin

ಮಂಗಳೂರು: ಪಡೆದಿರುವುದನ್ನು ಸಮಾಜಕ್ಕೆ ಮರಳಿ ಕೊಡುವುದೇ ನಮ್ಮೆಲ್ಲರ ಧರ್ಮವಾದಾಗ ಪಡೆದ ಶಿಕ್ಷಣ ಅರ್ಥಪೂರ್ಣವೆನಿಸುತ್ತದೆ. ಸಹಾನುಭೂತಿ ಮತ್ತು ಅನುಕಂಪದ ಮೂಲಕ ಸಾರ್ಥಕ್ಯ ಮನೋಭಾವಕ್ಕೆ ಮಾದರಿಯಾಗಿರುವವರು ದಾನಿ ಉದ್ಯಮಿ ದಯಾನಂದ ಪೈ . ಧ್ಯಾನ ಮತ್ತು ಜ್ಞಾನಕ್ಕೆ ಸ್ಫೂರ್ತಿ ಯಾಗಿ ಅವರ ನೇತೃತ್ವದಲ್ಲಿ ವಿಶ್ವ ಕೊಂಕಣಿ ಕೇಂದ್ರ ಅರಳಿ ನಿಂತಿದೆ ಎಂದು ಮಂಗಳೂರು ವಿ.ವಿ.ಯ ಉಪ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು.

ಅವರು ಮಂಗಳವಾರ ಶಕ್ತಿನಗರದ ಕೊಂಕಣಿ ಗಾಂವ್ನ ಲೋಬೋ ಪ್ರಭು ನಗರದಲ್ಲಿ ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ವಿಶ್ವ ಕೊಂಕಣಿ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕೇಂದ್ರ ಗೋಪುರ ಶಿಲಾನ್ಯಾಸ, ವೆಬ್ ಪೋರ್ಟಲ್ ಲೋಕಾರ್ಪಣೆ ಹಾಗೂ ಕೊಡುಗೈ ದಾನಿ ಡಾ.ಪಿ. ದಯಾನಂದ ಪೈ ಅವರ 77ನೇ ಜನ್ಮ ದಿನಾಚರಣೆಯ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಯನ ಕೇಂದ್ರಕ್ಕೆ ಮಂಗಳೂರು ವಿವಿಯ ಮಾನ್ಯತೆ ಶೀಘ್ರದಲ್ಲಿ ಕೊಡುತ್ತಿರುವುದಾಗಿ ಅವರು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಕೊಂಕಣಿ ಕೇಂದ್ರದ ಕೀರ್ತಿ ಮಂದಿರದಲ್ಲಿ ದಯಾನಂದ ಪೈಯವರ ಭಾವಚಿತ್ರವನ್ನು ಅವರು ಅನಾವರಣಗೊಳಿಸಿದರು.

ನೂತನ ಕೇಂದ್ರ ಗೋಪುರಕ್ಕೆ ಶಿಲಾನ್ಯಾಸ ನೆರವೇರಿಸಿ, ಜನ್ಮದಿನದ ಸುಸಂದರ್ಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ. ದಯಾನಂದ ಪೈ ಗಳಿಸಿದ್ದೆಲ್ಲವೂ ಸಮಾಜಕ್ಕೆ ಸೇರಿದ್ದು. ಸಂತಸಕ್ಕಿಂತ ಸಾರ್ಥಕತೆಗೆ ಒತ್ತು ನೀಡಬೇಕು. ವಿಶ್ವ ಕೊಂಕಣಿ, ಸಾರಸ್ವತ ಸಮ್ಮೇಳನ , ಕೊಂಕಣಿ ಕೇಂದ್ರದ ರೂವಾರಿಯಾಗಿದ್ದ ಬಸ್ತಿ ವಾಮನ ಶೆಣೈ ಇಂತಹ ಸಾರ್ಥಕತೆಗೆ ನಿದರ್ಶನವಾಗಿ ಬಾಳಿದವರು. ವಿಶ್ವಕೊಂಕಣಿ ಕೇಂದ್ರಕ್ಕೆ ಅಭಿಮುಖವಾಗಿ ಅವರ ಆಳೆತ್ತರದ ಪ್ರತಿಮೆ ನಿರ್ಮಾಣವಾಗಿ ನಮಗೆ ಸ್ಫೂರ್ತಿಯಾಗಬೇಕಿದೆ ಎಂದರು. ವಿಶ್ವ ಕೊಂಕಣಿ ಕೇಂದ್ರದ ಚಟುವಟಿಕೆಗಳಿಗೆ 1 ಕೋಟಿ ರೂ ನೆರವು ಪ್ರಕಟಿಸಿದ ಅವರು ಬಸ್ತಿಯವರ ಪುತ್ಥಳಿ ಸೇರಿದಂತೆ ಕೇಂದ್ರದ ಚಟುವಟಿಕೆಗಳಿಗೆ ಕೊಡುಗೆ ನೀಡಲು ಆಸಕ್ತರಾಗಿರುವುದಾಗಿ ತಿಳಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಜಿ. ನಂದಗೋಪಾಲ ಶೆಣೈ ಸ್ವಾಗತಿಸಿ ನೂತನ ಕೇಂದ್ರ ಗೋಪುರದ ಒಂದು ಅಂತಸ್ತಿನಲ್ಲಿ ಅಮೃತ ಸ್ವಾತಂತ್ರ್ಯ

ಮಹೋತ್ಸವದ ಸುಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರಾಗಿ ಕೊಂಕಣಿ ಸಮುದಾಯದಿಂದ ಶ್ರಮಿಸಿದವರ ಕೀರ್ತಿ ಮಂದಿರ ನಿರ್ಮಾಣ , ಡಾ. ದಯಾನಂದ ಪೈ ಹೆಸರಲ್ಲಿ ಕೊಂಕಣಿ ಅನುವಾದ, ರಂಗಭೂಮಿಗೆ ಸಂಬಂಧಿಸಿ ತಲಾ 1ಲಕ್ಷ ರೂ ಮೊತ್ತದ ಎರಡು ಪ್ರಶಸ್ತಿಗಳ ಆರಂಭ ಸೇರಿದಂತೆ ನೂತನ ಚಟುವಟಿಕೆಗಳ ಚಿತ್ರಣವಿತ್ತರು.

ಸಂಸದ ನಳಿನ್ ಕುಮಾರ್, ಕಟೀಲ್ , ಉದ್ಯಮಿ ಟಿ.ವಿ. ಮೋಹನದಾಸ್ ಪೈ, ಕೆ. ಉಲ್ಲಾಸ್ ಕಾಮತ್ ಆನ್ಲೈನ್ ಮೂಲಕ ಶುಭಾಶಂಸನೆಗೈದರು. ಪ್ರದೀಪ್ ಜಿ.ಪೈ, ಡಾ. ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಹೆಬ್ಬಾರ್, ಡಾ. ಕೃಷ್ಣ ಪ್ರಸಾದ್ , ಕೊಂಕಣಿ ಕೇಂದ್ರದ ಕಾರ್ಯದರ್ಶಿ ಗಿರಿಧರ ಕಾಮತ್ ದಯಾನಂದ ಪೈ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದರು.

ಪಿ. ಸತೀಶ್ ಪೈ ಅವರು ವಿಶ್ವ ಕೊಂಕಣಿ ಕೆಂದ್ರದ ಸಮಾಜ ಮುಖಿ ಸೇವಾ ಕಾರ್ಯಗಳಿಗಾಗಿ ಸಮಾಹಿತ ಎನ್ನುವ ನೂತನ ವೆಬ್ ಪೋರ್ಟಲ್ ಲೊಕಾರ್ಪಣೆಗೈದರು.

ದಯಾನಂದ ಪೈ ಪರಿವಾರದವರಿಂದ ಕೇಂದ್ರದ ಆವರಣದಲ್ಲಿ ಔಷದೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮವೂ ನಡೆಯಿತು. ವೇದಿಕೆಯಲ್ಲಿ ಮೋಹಿನಿ ದಯಾನಂದ ಪೈ, ಅವರ ಪುತ್ರ ಪಿ. ರವೀಂದ್ರ ಪೈ, ಸಬಿತಾ ಸತೀಶ್ ಪೈ, ಅವರ ಪುತ್ರ ಪಿ. ಅಶ್ವಿನ್ ಪೈ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಕುಡ್ಪಿ ಜಗದೀಶ ಶೆಣೈ, ಗಿಲ್ಬಟರ್್ ಡಿ.ಸೋಜಾ ಉಪಸ್ಥಿತರಿದ್ದರು. ಟ್ರಸ್ಟಿ ಶಕುಂತಲಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್ ಬಂಟ್ವಾಳ್ಕರ್ ವಂದಿಸಿದರು.

Leave a Comment