ಬಂಟ್ವಾಳ :ಕರಸೇವಕರ ಸಕ್ರೀಯ ಭಾಗವಹಿಸುವಿಕೆಯಿಂದ ಪವಾಡ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಅತ್ಯಂತ ವೇಗವಾಗಿ, ವ್ಯವಸ್ಥಿತವಾಗಿ ನಡೆಯುತ್ತಾ ಬರುತ್ತಿದ್ದು, ಕೆಲವೇ ದಿನಗಳಲ್ಲಿ ದೇವಸ್ಥಾನದ ಪ್ರಾಂಗಣ ಮದುವಣಗಿತ್ತಿಯಂತೆ ಶೃಂಗಾರಗೊಳ್ಳಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ ಸಂತಸ ವ್ಯಕ್ತಪಡಿಸಿದರು. ಕಳ್ಳಿಗೆ ಗ್ರಾಮದ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶದ ಪೂರ್ವಭಾವಿಯಾಗಿ ನಡೆದ ಚಪ್ಪರ ಮುಹೂರ್ತ ಸಂದರ್ಭ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಫೆಬ್ರವರಿ 15ರಂದು ಬಿ.ಸಿ. ರೋಡ್ ಶ್ರೀ ನಾರಾಯಣ ಗುರು ವೃತ್ತದಿಂದ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆಯು ಕ್ಷೇತ್ರಕ್ಕೆ ಆಗಮಿಸಲಿದ್ದು, ಈ ಬಗ್ಗೆ ಪ್ರತೀ ಗ್ರಾಮಗಳಲ್ಲಿ ವಿಭಾಗವಾರು ಸಭೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬರಿಗಾಲಲ್ಲೇ ಮೆರವಣಿಗೆಯಲ್ಲಿ ಪೂರ್ತಿಯಾಗಿ ಭಾಗವಹಿಸುವುದಾಗಿ ತಿಳಿಸಿರುತ್ತಾರೆ. ಮೆರವಣಿಗೆ ಜೊತೆಗೆ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.
ಜೀರ್ಣೋದ್ಧಾರ ಕಾರ್ಯಗಳು ಅಸಾಧ್ಯವನ್ನು ಸಾಧ್ಯವಾಗಿಸಿದೆ. ಹಲವಾರು ಸಂಗತಿಗಳನ್ನು ಪರಾಮರ್ಶಿಸಿದಾಗ ಭಗವಂತನೇ ನಮಗೆ ಪ್ರೇರಣೆ ನೀಡಿ ಮುನ್ನಡೆಸುತ್ತಿದ್ದಾನೆ ಎಂಬಂತೆ ಭಾಸವಾಗುತ್ತಿದೆ. ಬ್ರಹ್ಮಕಲಶ ದಿನ ಭಾಗವಹಿಸುವ ಭಕ್ತರ ಸಂಖ್ಯೆಯನ್ನು ಊಹಿಸಲೂ ಅಸಾಧ್ಯ. ಆದ್ದರಿಂದ ಎಲ್ಲಿಯೂ ಕೊರತೆಯಾಗದ ರೀತಿಯಲ್ಲಿ ಸ್ವಯಂಸೇವಕರು ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ, ಉಪಚರಿಸಿ ಅಷ್ಟೇ ಪ್ರೀತಿಯಿಂದ ಬೀಳ್ಕೊಡಬೇಕಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಎಸ್ ಗುರುಪುರ ಸಾಹಿತ್ಯದ ಧನುಷಾ ಗಾಣಿಗ ಕಲ್ಲಡ್ಕ ಹಾಡಿರುವ ಬ್ರಹ್ಮಕಲಶ ಆಮಂತ್ರಣ ಗೀತೆಯ ಟೀಸರ್ ಬಿಡುಗಡೆ ಮಾಡಲಾಯಿತು. ಬಳಿಕ ಹಸಿರುವಾಣಿ ಹೊರೆಕಾಣಿಕೆ ಕರಪತ್ರ, ಪ್ರಚಾರದ ಸ್ಟಿಕ್ಕರ್ ಬಿಡುಗಡೆಗೊಳಿಸಿ ಅದನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಸಂಚಾಲಕ ತೇವು ತಾರನಾಥ ಕೊಟ್ಟಾರಿ ಫರಂಗಿಪೇಟೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ,
ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿವಾಕರ ಶೆಟ್ಟಿ ಕುಪ್ಪಿಲಗುತ್ತು, ಕೇಶವ ದೈಪಲ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಮಿತಾ ವಿಶ್ವನಾಥ್ ದಾಸರಕೋಡಿ, ಉಮಾ ಲಿಂಗಪ್ಪ ಕುಲಾಲ್ ತುಂಬೆ, ಪ್ರಮುಖರಾದ ಶಿವರಾಮ ಶಿಬರಾಯ, ಭುವನೇಶ್ ಪಚ್ಚಿನಡ್ಕ, ರಾಘವೇಂದ್ರ ಕಾರಂತ ಕನಪಾಡಿ, ಅನಿಲ್ ಕುಮಾರ್ ಪಂಡಿತ್ ವಳವೂರು, ಜಯಕುಮಾರ್ ಎಸ್.ಎನ್ ಬೆಂಜನಪದವು, ರಾಮಕೃಷ್ಣ ಪೊನ್ನೋಡಿ, ಮುಂಡಾಜೆಗುತ್ತು ಜ್ಯೋತೀಂದ್ರ ಶೆಟ್ಟಿ, ಪೂವಪ್ಪ ಸಪಲ್ಯ ದರಿಬಾಗಿಲು, ದಿವಾಕರ ಶೆಟ್ಟಿ ಪರಾರಿಗುತ್ತು, ವೇದನಾಥ್ ಶೆಟ್ಟಿ ಮೊಡಂಕಾಪುಗುತ್ತು, ವಿಶ್ವನಾಥ್ ದಾಸರಕೋಡಿ, ಶಿವಪ್ರಸಾದ್ ಹೆಗ್ಡೆ ಮಿಜಾರು, ಮನೋಜ್ ವಳವೂರು, ಉಮೇಶ್ ಗಾಂದೋಡಿ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ದೇವಿಪ್ರಸಾದ್ ಎಂ ದೇವಂದಬೆಟ್ಟು, ಮಾಧವ ವಳವೂರು ಮತ್ತಿತರರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಸ್ವಾಗತ, ನಿರೂಪಣೆ ನೆರವೇರಿಸಿದರು. ಸದಸ್ಯ ಸತೀಶ್ ಶೆಟ್ಟಿ ಮೊಡಂಕಾಪು ವಂದಿಸಿದರು.
ಬಳಿಕ ಸೇವಾರೂಪದಲ್ಲಿ ಕರಸೇವೆಕರು ದೇವಸ್ಥಾನಕ್ಕೆ ಬಣ್ಣ ಬಳಿದರು. ವಿವಿಧ ವಿಶ್ವಜ್ಯೋತಿ ಯುವಕ ಸಂಘ ಸದಸ್ಯರು ಕಲ್ಲುಹಾಸು ಅಳವಡಿಕೆ, ಮಹಿಳೆಯರು ಸ್ವಚ್ಛತೆ ಇನ್ನಿತರ ಕೆಲಸ ನಿರ್ವಹಿಸಿದರು. ಸೋಮವಾರ ಕೈಕುಂಜೆಯ ಮಹಿಳೆಯರು, ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ ಹಾಗೂ ಶ್ರೀ ರಾಮ ಭಜನಾ ಮಂದಿರದ ಸದಸ್ಯರು ಶ್ರಮಸೇವೆ ನಡೆಸಿದರು. ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 76 ಮಂದಿ ಸದಸ್ಯರು ಸ್ವಚ್ಛತಾ ಸೇವೆಯಲ್ಲಿ ತೊಡಗಿಸಿಕೊಂಡರು.














