ವನಸಿರಿಯ ಪ್ರಾರಂಭ ಎಲ್ಲಿಂದ ಅನ್ನೋ ಗೊಂದಲ ಸೃಷ್ಟಿಯಾದಾಗ ನೇತಾಜಿ ಸುಭಾಸ್ಚಂದ್ರ ಶಾಲೆಯ ಮಾಸ್ಟರ್ ನನಗೆ ಕರೆ ಮಾಡಿದರು. "ಸರ್ ನಾನು ನಿಮ್ಮ ಟೆರೇಸ್ ಗಾರ್ಡನನ್ನು ತೋರಿಸಲು ಮಕ್ಕಳನ್ನು ಕರೆದು ತರಬಹುದೇ" ಅಂತ ಕೇಳಿದರು. ಯಾಕೋ ತಟ್ಟನೆ ಹಿರಿಯರ ಮಾತು ನೆನಪಿಗೆ ಬಂತು."ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದು ಹಾಲು" ಸರ್ ಎಷ್ಟು ಮಕ್ಕಳಿದ್ದಾರೆ ಅಂತ ಕೇಳಿದೆ. ಸರ್ 40 ಇದ್ದಾರೆ ಆದರೆ 2 ಬ್ಯಾಚಿನಲ್ಲಿ ಕರೆದು ತರುತ್ತೇನೆ ಎಂದರು. ಸರಿ ಅಂತ ಅಂದೆ. ಮಕ್ಕಳಿಗೆ ಹೇಳಬೇಕಾದ ವಿಷಯಗಳ ಬಗ್ಗೆ ಒಮ್ಮೆ ಮನಸ್ಸಿನಲ್ಲಿಯೇ ವ್ಯವಸ್ಥಿತವಾಗಿ ಜೋಡಿಸಿಕೊಂಡೆ.
ಮಕ್ಕಳಿಗಾಗಿ ಪೆನ್ನು, ಜ್ಯೂಸ್, ತಿಂಡಿಗಳನ್ನು ಖರೀದಿಸಿ ತಂದು ನನ್ನ ಹಾಲ್ನಲ್ಲಿ ಜೋಡಿಸಿಟ್ಟೆ. 9 ಘಂಟೆಗೆ ಸರಿಯಾಗಿ ಮಕ್ಕಳೊಂದಿಗೆ ಅದ್ಯಾಪಕರು ಬಂದರು. ಅವರನ್ನೆಲ್ಲಾ ನನ್ನ ಟೆರೇಸ್ ಗಾರ್ಡನ್ಗೆ ಕರೆದುಕೊಂಡು ಹೋಗಿ ಪ್ರತೀ ಗಿಡಗಳ ಬಗ್ಗೆ ವಿವರಣೆ, ಮಣ್ಣು ಗೊಬ್ಬರದ ಮಿಶ್ರಣದ ಕುರಿತು ಮಾಹಿತಿ, ಗಿಡ ನೆಡುವ ಕ್ರಮ, ಉದ್ದೇಶ ಇವೆಲ್ಲದರ ಬಗ್ಗೆ ವಿವರಣೆ ನಂತರ ಹಾಲಿನಲ್ಲಿ ಒಂದು ಸಭೆ. ಪ್ರಶ್ನೆ-ಉತ್ತರ-ಉದ್ದೇಶ-ಸಾಧನೆ -ಭರವಸೆಯನ್ನು ಮಕ್ಕಳಿಂದ ಪಡೆದಾಗ ಅದೇನೋ ತೃಪ್ತಿ. ನನ್ನ ಚಿಕ್ಕ ಕಲೆಕ್ಷನ್ಗಳತ್ತ ಒಂದು ನೋಟ. ನಾನಾ ದೇಶದ ನಾಣ್ಯಗಳು, ನೋಟುಗಳು, ಸ್ಟ್ಯಾಂಪ್, ವಾಚುಗಳು, ಫಾರ್ಪುಮ್ಸ್ಗಳು, ನನಗೆ ಸಿಕ್ಕ ಪ್ರಶಸ್ತಿಗಳ ತೋರಿಸಿ ಮತ್ತೆ ಸ್ವಲ್ಪ ಬುದ್ಧಿವಾದವ ಹೇಳಿ ಕಳುಹಿಸಿದ ಮೊದಲ ಬ್ಯಾಚ್ ಹೋದ ನಂತರ 2ನೇ ಬ್ಯಾಚ್ ಅದು ಹುಡುಗಿಯರದ್ದು ಸಂಖ್ಯೆ ಸ್ವಲ್ಪ ಜಾಸ್ತಿ. ಅವರಿಗೂ ಅದೇ ರೀತಿಯ ಭೋಧನೆ ಆದರೇ ಬುದ್ಧಿ ಮಾತು ಸ್ವಲ್ಪ ಜಾಸ್ತಿ. ಅಲ್ಲದೆ ಅವರಿಗೆ ಈ ವಿಷಯದಲ್ಲಿ ಒಂದು ಪ್ರಭಂದ ಬರೆದು ಸೋಮವಾರ ಕೊಡಲು ತಿಳಿಸಿದ್ದೇನೆ ಉತ್ತಮ ಪ್ರಭಂದಕ್ಕೆ ಎರಡು ಬ್ಯಾಚಿನ ನಾಲಕ್ಕು ಮಕ್ಕಳಿಗೆ ಮೊದಲ ಹಾಗೂ
ದ್ವಿತೀಯ ಬಹುಮಾನವನ್ನು ನೀಡಲಾಗುವುದು ಮಕ್ಕಳಲ್ಲಿ ಸ್ವಲ್ಪ ಪರಿವರ್ತನೆ ಆದಂತೆ ಭಾಸವಾಯಿತು. "ತೇದಿದರೆ ಗಂಧ ಪರಿಮಳವ ಬೀರುವಂತೆ ತಿದ್ದಿ ತೀಡಿದರೆ ಮಕ್ಕಳನ್ನು ಉತ್ತಮ ನಾಗರಿಕರಾಗಿ ಬೆಳೆಸಲು ಸಾಧ್ಯ" ಅನ್ನೋ ಮಾತನ್ನು ನಾನು ಮಕ್ಕಳೊಂದಿಗಿನ ಮುಕ್ತ ಭೇಟಿ ಯಿಂದ ಕಂಡುಕೊಂಡೆ. ಮಾತ್ರವಲ್ಲ ಮಕ್ಕಳು ಮತ್ತು ಮತ್ತು ಹೆತ್ತವರ ಮಧ್ಯೆ ಗ್ಯಾಪ್ ಜಾಸ್ತಿಯಾಗುತ್ತಿದೆ ಮಕ್ಕಳು ಅದೇನೋ ಹೇಳಬಯಸುತ್ತಾರೆ ಆದ್ರೆ ಕೇಳುವ ಕಿವಿಗಳು ದೂರವಾಗಿವೆ ಅನ್ನೋ ಮಾತು ಆ ಪುಟ್ಟ ಮಕ್ಕಳ ಬಾಯಿಯಿಂದ ಕೇಳಿದಾಗ ಯಾಕೋ ಮನಸ್ಸಿಗೆ ನೋವೆನಿಸುತ್ತದೆ. ನಮ್ಮ ಮಕ್ಕಳ ಮಾತ ಕೇಳಲು ನಮಗೆ ಸಮಯವಿಲ್ಲದೇ ಹೋದರೇ ನಮ್ಮ ಮಕ್ಕಳ ಬಗ್ಗೆ ಬೇರೆಯವರಿಂದ ಕೇಳಲೂ ಕೂಡಾ ನಾವು ಸಿದ್ಧರಾಗಿರಬೇಕು ಅನ್ನೋ ಮಾತು ಈ ಒಂದು ಪುಟ್ಟ ಸಂದರ್ಶನದಲ್ಲಿ ನಾನು ಮನಗಂಡೆ. ಅದೇನೇ ಇರಲಿ. ಪ್ರಯತ್ನ ಮಾತ್ರ ನಮ್ಮದಾಗಿರಲಿ. ಹಾಗೊಂದು ಪರಿವರ್ತನೆಯತ್ತ ಒಂದು ಹೆಜ್ಜೆ ಮಾತ್ರ.
ಕೊಡಂಗೆ ನೇತಾಜಿ ಸುಭಾಸ್ಚಂದ್ರ ಪ್ರೌಢ ಶಾಲೆಯ ಮಕ್ಕಳು ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ರಾದ ಡಾ. ಗೋವರ್ಧನ್ ರಾವ್ ರವರ ಟೆರೇಸ್ ಗಾರ್ಡನ್ಗೆ ತಾರೀಕು 03-08-2022ರಂದು ಭೇಟಿಕೊಟ್ಟ ಸಂದರ್ಭ.
















