ಬಂಟ್ವಾಳ, ಮಾ. 5: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ 105ವರ್ಷಗಳ ಬಳಿಕ ಲೋಕಕಲ್ಯಾಣಾರ್ಥ ಹಾಗೂ ಸಾನ್ನಿಧ್ಯ ವೃದ್ಧಿಗಾಗಿ ಶತಚಂಡಿಕಾಯಾಗವು ಮಾ. 5ರಂದು ಬುಧವಾರ ವಿವಿಧ ಧಾರ್ಮಿಕ ವಿಧಿಧಾನಗಳೊಂದಿಗೆ ನಡೆದಿದ್ದು, 30 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
ಬ್ರಹ್ಮಶ್ರೀ ವೇ। ಪೊಳಲಿ ಶ್ರೀಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿಗಳು ನೆರವೇರಿದವು. ದೇವಸ್ಥಾನದ ಮುಂಭಾಗದಲ್ಲಿ ಸಂಪೂರ್ಣವಾಗಿ ಹೂವುಗಳಿಂದ ಸಿಂಗಾರಗೊಂಡ ಯಾಗ ಮಂಟಪದಲ್ಲಿ ಮುಂಜಾನೆ ಯಾಗ ಆರಂಭಗೊಂಡಿದ್ದು, ಬೆಳಗ್ಗೆ ಹೋಮ ಪೂಜೆ ನಡೆದು ಮಧ್ಯಾಹ್ನ ಪೂರ್ಣಾಹುತಿಯ ಬಳಿಕ ದೇವರಿಗೆ ಮಹಾಪೂಜೆ ನೆರವೇರಿತು. ಮಧ್ಯಾಹ್ನ ಪಲ್ಲಪೂಜೆಯ ಬಳಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದಜಿ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು, ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊತ್ತೇಸರ ಪಿ.ಮಾಧವ ಭಟ್, ಮಾಜಿ ಸಚಿವರಾದ ಬಿ.ರಮಾನಾಥ ರೈ,
ಬಿ.ನಾಗರಾಜ ಶೆಟ್ಟಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಉತ್ಸವದ ಹಿನ್ನೆಲೆಯಲ್ಲಿ ಮಾ. 1ರಿಂದಲೇ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದು, ಮೊದಲ ದಿನ ಭಕ್ತರು ಹೊರೆಕಾಣಿಕೆಯನ್ನೂ ಸಮರ್ಪಿಸಿದ್ದರು.
ಬುಧವಾರ ಸಂಜೆ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಗಾಯಕ ಅಜಯ್ ವಾರಿಯರ್ ಬಳಗದಿಂದ ಭಕ್ತಿ ರಸಧಾರೆ, ಮಂಗಳೂರು ಲಲಿತೆ. ಕಲಾವಿದರಿಂದ 'ಗರುಡ ಪಂಚಮಿ' ನಾಟಕ ಪ್ರದರ್ಶನಗೊಂಡಿತು.
ಮಾ. 6ರಂದು ಸೇವಾರೂಪದ ದೊಡ್ಡ ರಂಗಪೂಜೆ
ಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿಗಳು ನಡೆದು ರಾತ್ರಿ 7.30ಕ್ಕೆ ಸೇವಾರೂಪದ ದೊಡ್ಡ ರಂಗಪೂಜೆ, ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ರಥ, ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ ನಡೆಯಲಿದೆ














