ಬಂಟ್ವಾಳ ಡಿ. 5.ಯಾವ ಮಗುವೂ ನಿಷ್ಪ್ರಯೋಜಕ ಅಲ್ಲ.ಪ್ರತಿಯೊಂದು ಮಗುವಿನಲ್ಲೂ ಅಗಾಧವಾದ ಶಕ್ತಿ ಅಡಗಿದೆ .ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಹೆತ್ತವರ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಕೆ.ಎಂ.ಸಿ.ಮಂಗಳೂರಿನ ಡಾ. ಕಿರಣ್ ಎನ್.ಬಾಳಿಗ ಹೇಳಿದರು.
ಅವರು ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಅರ್ಜುನ್ ಭಂಡಾರ್ಕರ್ ಮಾತನಾಡಿ ಸಾಧನೆಗೆ ಪರಿಶ್ರಮ,ಸಮರ್ಪಣೆ ಅಗತ್ಯವೆಂದರು.ಸಾಧನೆ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.ಅವರನ್ನು ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆ ಯ ವತಿಯಿಂದ ಸ್ಮರಣಿಗೆ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ರೋಶನಿ ತಾರಾ ಡಿಸೋಜ ಶಾಲಾ ವಾರ್ಷಿಕ ವರದಿ ವಾಚಿಸಿದರು.ಪ.ಪೂ.ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಕಾಲೇಜಿನ
ಚಟುವಟಿಕೆಗಳ ವಿವರ ನೀಡಿದರು.ಆಡಳತ ಮಂಡಳಿ ಹಾಗೂ ಹೆತ್ತವರ ಸಹಕಾರವನ್ನು ಸ್ಮರಿಸಿದರು.
ಎಸ್.ವಿ.ಎಸ್.ವಿದ್ಯಾ ಸಂಸ್ಥೆಗಳ ಸಂಚಾಲಕ ಸ್ವರ್ಣೋದ್ಯಮಿ ಬಿ.ಸುರೇಶ್ ಬಾಳಿಗ ಅಧ್ಯಕ್ಷತೆ ವಹಿಸಿದ್ದರು.ಎಸ್.ಎಸ್.ಎಲ್.ಸಿ.ಯಲ್ಲಿ ಅತಿಹೆಚ್ಚು ಅಂಕಗಳಿಸಿದ ಮತ್ತು ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಬಿ.ಶಿವಾನಂದ ಬಾಳಿಗ,ಪಿಟಿಎ ಅಧ್ಯಕ್ಷ ಮನೋಜ್ ಕುಮಾರ್ ಆಳ್ವ,ಸಹಮುಖ್ಯ ಶಿಕ್ಷಕಿ ಜಾನಕಿ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.
















