ಫರಂಗಿಪೇಟೆ :ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ. ಪರೋಪಕಾರದಿಂದ ಆರೋಗ್ಯಕರ ಜೀವನ : ಫಾದರ್ ವಿಲಿಯಂ ಮಿನೇಜಸ್

Coastal Bulletin
ಫರಂಗಿಪೇಟೆ :ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ. ಪರೋಪಕಾರದಿಂದ ಆರೋಗ್ಯಕರ ಜೀವನ : ಫಾದರ್ ವಿಲಿಯಂ ಮಿನೇಜಸ್

ಬಂಟ್ವಾಳ: ಇತರರ ಒಳಿತಿಗಾಗಿ ಮಾಡುವ ಸೇವೆ ಅವರ ಬದುಕಿಗೆ ಬೆಳಕು ನೀಡುವುದರ ಜೊತೆಗೆ ನಮ್ಮ ಮನಸ್ಸಿಗೂ ನೆಮ್ಮದಿ ಹಾಗೂ ಸಂತೋಷವನ್ನು ನೀಡುತ್ತದೆ. ಪರೋಪಕಾರದ ಮನೋಭಾವದಿಂದ ಮಾನಸಿಕ ನೆಮ್ಮದಿ ಮತ್ತು ಆರೋಗ್ಯಕರ ಜೀವನ ಸಾಧ್ಯ, ಅ ಕಾರ್ಯ ಸೇವಾಂಜಲಿ ಮಾಡುತ್ತಿದೆ ಎಂದು ಮೇರಮಜಲು ಚರ್ಚ್‌ನ ಧರ್ಮಗುರು ರೆವರೆಂಡ್ ಫಾದರ್ ವಿಲಿಯಂ ಮಿನೇಜಸ್ ಹೇಳಿದರು.

ಅವರು ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ, ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಹಾಗೂ ದವಸ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.

ಮುಖ್ಯ ಅತಿಥಿ ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಮಾತನಾಡಿ, ನಿರಂತರವಾಗಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಒದಗಿಸುತ್ತಿರುವ ಕೃಷ್ಣಕುಮಾರ್ ಪೂಂಜ ಅವರ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು, ದೇವರು ಮೆಚ್ಚುವಂತಹ ಸೇವೆಯಾಗಿದೆ ಎಂದು ಹೇಳಿದರು.

ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಕ್ಷಯರೋಗ ಹಾಗೂ

ಆರೋಗ್ಯದ ಕುರಿತು ಮಾಹಿತಿ ನೀಡಿದರು. ಯೆನಪೋಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅನುಪಮ ನಾಯರ್ ಹಾಗೂ ಸಾಮಾಜಿಕ ಕಾರ್ಯಕರ್ತ ಸುನೀಲ್ ಫೆರ್ನಾಂಡೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದ್ದು, ಸುಮಾರು ₹17 ಲಕ್ಷ ವೆಚ್ಚದಲ್ಲಿ ಈವರೆಗೆ 264 ಮಂದಿ ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು.

ಸೇವಾಂಜಲಿ ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.

Leave a Comment