ಬಂಟ್ವಾಳ: ಯಕ್ಷಕಲಾ ಪೊಳಲಿಯ 31ನೇ ವರ್ಧಂತ್ಯುತ್ಸವದ ಅಂಗವಾಗಿ ಪೊಳಲಿ ಯಕ್ಷೋತ್ಸವ-2026 ಕಾರ್ಯಕ್ರಮ ಅ. 11ರಂದು ಭಾನುವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷಕಲಾ ಸಂಚಾಲಕ ವೆಂಕಟೇಶ ನಾವಡ ಪೊಳಲಿ ತಿಳಿಸಿದರು.
ಅವರು ಬಿ ಸಿ ರೋಡ್ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸಂಜೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಯಕ್ಷಕಲಾ ಪೊಳಲಿ ವತಿಯಿಂದ ನೀಡಲಾಗುತ್ತಿರುವ ಪೊಳಲಿ ಯಕ್ಷೋತ್ಸವ ಪ್ರಶಸ್ತಿಯನ್ನು ಈ ಬಾರಿ ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಗೆ ಪ್ರದಾನಿಸಲಾಗುವುದು ಎಂದರು.
ಈ ವರ್ಷದಿಂದ ರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಸ್ಮೃತಿ ಗೌರವ ಪ್ರಶಸ್ತಿಯನ್ನು ಆರಂಭಿಸಲಾಗಿದ್ದು, ಹಿರಿಯ ಹಿಮ್ಮೇಳ ಗುರು ಹರಿನಾರಾಯಣ ಬೈಪಡಿತ್ತಾಯ ಅವರಿಗೆ ನೀಡಿ ಗೌರವಿಸಲಾಗುವುದು. ಅಲ್ಲದೆ, 15 ಮಂದಿ ಹಿರಿಯ ಕಲಾವಿದರನ್ನು ಗೌರವ ನಿಧಿಯೊಂದಿಗೆ ಸನ್ಮಾನಿಸಲಾಗುವುದು. ಯಕ್ಷಗಾನ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವಾರ್ಪಣೆ ಹಾಗೂ ಕೀರ್ತಿಶೇಷರಾದ ಐವರು ಹಿರಿಯ ಕಲಾವಿದರ
ಸಂಸ್ಮರಣೆ ನಡೆಯಲಿದೆ ಎಂದು ಹೇಳಿದರು .
ಯಕ್ಷ ಸಂಘಟಕ ಜನಾರ್ದನ ಅಮ್ಮುಂಜೆ ಮಾತನಾಡಿ, ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ‘ರಾಜಾ ಯಯಾತಿ’, ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ‘ಇಂದ್ರಕೀಲಕ’ ಹಾಗೂ ರಾತ್ರಿ 7ರಿಂದ 10.30ರವರೆಗೆ ‘ರಾಮಾಂಜನೇಯ’ ಪೌರಾಣಿಕ ಯಕ್ಷಗಾನ ಬಯಲಾಟಗಳು ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಳ್ಳಲಿವೆ.
ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸನ್ಮಾನ ಹಾಗೂ ಸಂಸ್ಮರಣೆ ಕಾರ್ಯಕ್ರಮಗಳು ನಡೆಯಲಿವೆ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಹಾಗೂ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸುಬ್ರಾಯ ಕಾರಂತ ಪೊಳಲಿ, ಲೋಕೇಶ್ ಭರಣಿ, ಮೋಹನ್ ಬಿಲ್ವಪತ್ರೆ ಉಪಸ್ಥಿತರಿದ್ದರು.











