ಬಂಟ್ವಾಳ: ಕಳೆದ 10 ವರ್ಷಗಳಿಂದ ಬಿಜೆಪಿ ಬೆಂಬಲಿತ ಸದಸ್ಯರ ಹಿಡಿತದಲ್ಲಿದ್ದ ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಈ ಬಾರಿ ಅಧ್ಯಕ್ಷ ಹುದ್ದೆ ಬಿಜೆಪಿ ಮತ್ತು ಉಪಾಧ್ಯಕ್ಷ ಹುದ್ದೆ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಒಲಿದು ಬಂದಿದೆ. ಇಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಎನ್.ಜೆ.ಗೋಪಾಲ್ ಚುನಾವಣಾ ಪ್ರಕ್ರಿಯೆ ನಡೆಸಿದರು.
ನೂತನ ಅಧ್ಯಕ್ಷರಾಗಿ ಬಿಜೆಪಿ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ ಶೆಟ್ಟಿ ಮಡಂದೂರು ಮತ್ತು ಉಪಾಧ್ಯಕ್ಷಾಗಿ ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ, ಎಪಿಎಂಸಿ ಮಾಜಿ ಸದಸ್ಯ ಜಿ.ರಾಮಸುಂದರ ಗೌಡ ಗೋಳಿತಬೆಟ್ಟು ಆಯ್ಕೆಯಾಗಿದ್ದಾರೆ.
ಇಲ್ಲಿನ ಒಟ್ಟು 11 ಸ್ಥಾನಗಳ ಪೈಕಿ 7 ಮಂದಿ ಬಿಜೆಪಿ ಮತ್ತು 4 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ. ಮೂರನೇ ಅವಧಿಗೆ ಅಧ್ಯಕ್ಷ ಹುದ್ದೆ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಜಿ.ಸುಂದರ ಭಂಡಾರಿ ಮತದಾನ ಬಹಿಷ್ಕರಿಸಿದ
ಪರಿಣಾಮ ಅಧ್ಯಕ್ಷರಾಗಿ ದಿನೇಶ ಶೆಟ್ಟಿ ಅವಿರೋಧ ಆಯ್ಕೆಗೊಂಡರು.
ಉಪಾಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತ ಸದಸ್ಯ ವಸಂತ ಗೌಡ ಮುದ್ದಾಜೆ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯ ಜಿ.ರಾಮಸುಂದರ ಗೌಡರ ನಡುವೆ ಸ್ಪರ್ಧೆ ನಡೆದು, ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಅಡ್ಡಮತದಾನ ಮಾಡಿದ ಪರಿಣಾಮ ಇಬ್ಬರಿಗೂ ತಲಾ -5ರಂತೆ ಸಮಬಲ ಉಂಟಾಯಿತು. ಇದೇ ವೇಳೆ ಅದೃಷ್ಟ ಚೀಟಿ ಮೂಲಕ ಕಾಂಗ್ರೆಸ್ ಬೆಂಬಲಿತ ಸದಸ್ಯ ಜಿ.ರಾಮಸುಂದರ ಗೌಡ ಉಪಾಧ್ಯಕ್ಷರಾಗಿ ಆಯ್ಕೆಗೊಂಡು ಅಚ್ಚರಿ ಮೂಡಿಸಿದರು.














