ತ್ರಿಶ್ಶೂರ್ : ಕೇರಳದ ತ್ರಿಶೂರ್‌ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ ನಡೆಸಿದರು. ಬಿಜೆಪಿ ರಾಜ್ಯ ಘಟಕ ಆಯೋಜಿಸಿರುವ ಲಕ್ಷಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಇಂದು ಮಧ್ಯಾಹ್ನ ಕೇರಳಕ್ಕೆ ಬಂದಿಳಿದ ಪ್ರಧಾನಿ ಮೋದಿ ರೋಡ್‌ಶೋ ನಡೆಸಿ ನಂತರ ತೆಕ್ಕಿಂಕಾಡ್ ಮೈದಾನದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿಯವರನ್ನು ಸ್ವಾಗತಿಸಲು ಪಟ್ಟಣವನ್ನು ಬ್ಯಾನರ್ ಮತ್ತು ಹೋರ್ಡಿಂಗ್‌ಗಳಿಂದ ಅಲಂಕರಿಸಲಾಗಿದೆ. ಪ್ರಧಾನಿ ಮೋದಿ ಅವರ ದರ್ಶನಕ್ಕಾಗಿ ಮಹಿಳೆಯರು ಕಾದು ಕುಳಿತಿರುವುದು ಕಂಡುಬಂತು. ಅವರಲ್ಲಿ ಒಬ್ಬರು, “ನಮ್ಮ ಪ್ರಧಾನಿ ಮೋದಿ ಅತ್ಯಂತ ಗೌರವಾನ್ವಿತ ನಾಯಕ, ಅವರು ಇಲ್ಲಿನ ಮಹಿಳೆಯರನ್ನು ಉದ್ದೇಶಿಸಿ ಕೇರಳಕ್ಕೆ ಬರುತ್ತಿದ್ದಾರೆ. ನಾವು ಅವರನ್ನು ನೋಡಲು ಇಲ್ಲಿದ್ದೇವೆ” ಎಂದು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಯಶಸ್ವಿಯಾಗಿ ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಲು ‘ಸ್ತ್ರೀ ಶಕ್ತಿ ಮೋದಿಕ್ಕ್ ಒಪ್ಪಂ’ (ಮೋದಿಯೊಂದಿಗೆ ಸ್ತ್ರೀ ಶಕ್ತಿ ) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂಗನವಾಡಿ
ಶಿಕ್ಷಕಿಯರು , ಆಶಾ ಕಾರ್ಯಕರ್ತೆಯರು, ಉದ್ಯಮಿಗಳು, ಕಲಾವಿದರು, ಎಂಜಿಎನ್‌ಆರ್‌ಇಜಿಎ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಸೇರಿದಂತೆ ವಿವಿಧ ಹಿನ್ನೆಲೆಯ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದರು.
ಪ್ರಧಾನಿ ಮೋದಿ ಜನವರಿ 2-3 ತಾರೀಖಿನಂದು ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಮಂಗಳವಾರ, ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ₹ 20,000 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದರು. ನಂತರ ಅವರು ಲಕ್ಷದ್ವೀಪ ತಲುಪಿ ಕೇಂದ್ರಾಡಳಿತ ಪ್ರದೇಶದ ಪ್ರಗತಿಗೆ ಸಂಬಂಧಿಸಿದ ಅಂಶಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕವರತ್ತಿಯಲ್ಲಿ ಅವರು ₹1,156 ಕೋಟಿ ಮೊತ್ತದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.














