ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದರ 12ನೇ ಶಾಖೆ ಸಿದ್ಧಕಟ್ಟೆಯಲ್ಲಿ ಜನವರಿ 7ರಂದು ಭೂಮಿ ಕಾಂಪ್ಲೆಕ್ಸ್ ನಲ್ಲಿ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಈ ವಿಷಯವನ್ನು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲನೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಾಖೆ ಉದ್ಘಾಟನೆ ಮಾಡಲಿದ್ದು, ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಗಣಕಯಂತ್ರವನ್ನು ಉದ್ಘಾಟಿಸುವರು. ಸಂಗಬೆಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಪೂಜಾರಿ ಭದ್ರತಾ ಕೊಠಡಿ ಉದ್ಘಾಟಿಸುವರು ಎಂದು ತಿಳಿಸಿದರು. ಶಾಖೆ ಪ್ರಾರಂಭದ ಪ್ರಯುಕ್ತ ವಿಶೇಷ ಠೇವಣಿ ಯೋಜನೆಯನ್ನು ರೂಪಿಸಲಾಗಿದ್ದು, 1 ವರ್ಷದ ಠೇವಣಿಗೆ 0.25 ಶೇಕಡಾ ಹೆಚ್ಚುವರಿ ಬಡ್ಡಿದರವನ್ನು ಒದಗಿಸಲಾಗುವುದು, ಹಿರಿಯ ನಾಗರಿಕರ, ವಿಧವೆಯರ ಮತ್ತು ಸಂಘ,
ಸಂಸ್ಥೆಗಳ 180 ದಿನಗಳಿಗಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ 0.5 ಶೇ. ಹೆಚ್ಚುವರಿ ಬಡ್ಡಿದರ ನೀಡಲಾಗುತ್ತದೆ. ಗೃಹನಿರ್ಮಾಣ, ವಾಹನ ಖರೀದಿ, ಆಸ್ತಿ ಅಡಮಾನ, ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹಕ್ಕಾಗಿ ನೆರವು, ಚಿನ್ನಾಭರಣ ಈಡಿನ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತದೆ. ಬ್ಯಾಂಕಿನಲ್ಲಿ ಗುಡಿಕೈಗಾರಿಕಾ ವಸ್ತುಗಳ ಮಾರಾಟ ಮಳಿಗೆಯೂ ಇರಲಿದೆ ಎಂದರು.ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ, ನಿರ್ದೇಶಕರಾದ ಪ್ರಶಾಂತ್ ಬಂಜನ್, ಸೇಸಪ್ಪ ಕುಲಾಲ್ ಮತ್ತು ಬಂಟ್ವಾಳ ತಾಲೂಕು ಕುಲಾಲ ಸುಧಾರಕರ ಸಂಘದ ಅಧ್ಯಕ್ಷ ನಾರಾಯಣ ಸಿ.ಪೆರ್ನೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.















