ಜನವರಿ 1 ಎಂದರೆ ಹೊಸವರ್ಷ ಎಂದು ಸಂಭ್ರಮಿಸುತ್ತಿದ್ದ ಬಹುಪಾಲು ಮಂದಿಗೆ ಇದು ಇಂಗ್ಲೀಷ್ ಕ್ಯಾಲೆಂಡರ್ ಆಚರಣೆ. ಭಾರತೀಯರಾಗಿ ನಮ್ಮ ಹೊಸ ವರ್ಷ ಯುಗಾದಿ ಇಲ್ಲವೇ ಸಂಕ್ರಾಂತಿ ಎನ್ನುವ ತಿಳುವಳಿಕೆ ಆ ಕುರಿತ ಆಸಕ್ತಿ ನಿಧಾನವಾಗಿ ಹೆಚ್ಚುತ್ತಲೇ ಇದೆ. ಭಾರತೀಯ ಕಾಲಗಣನೆ ಪಂಚಾಂಗ ಆಧಾರಿತ. ಅದೊಂದು ಜಟಿಲತೆ, ಗೊಂದಲ ಎನ್ನುವವರಿಗೆ ನಮ್ಮ ದೇಶೀ ಕಾಲಗಣನೆ ಅದೆಷ್ಟು ಸರಳ, ಸುಂದರ ಅರ್ಥಪೂರ್ಣ ಎನ್ನುವುದನ್ನು ಪುತ್ತೂರಿನಿಂದ ಆಮ್ನಾಯಃ ಗನ್ಧವಹ ಸದನಮ್ ಗಾಳಿಮನೆಯ ಡಾ. ವಿನಾಯಕ ಭಟ್ ಲೋಕ ಮುಖಕ್ಕೆ ತೆರೆದಿಟ್ಟಿದ್ದಾರೆ. ಭಾರತೀಯ ಕಾಲಗಣನೆಯ ಸೌಂದರ್ಯವನ್ನು ಸರಳವಾಗಿ ನಿತ್ಯವೂ ಸಾಮಾಜಿಕ ಜಾಲತಾಣದ ಮೂಲಕವೂ ಪ್ರಸರಿಸಿ ದಿನದಶರ್ಿಕೆಯಾಗಿಯೂ ಹೊರತರುವ ಮೂಲಕ ಭಾರತಕ್ಕೆ ಬೇಕು ಭಾರತೀಯ ಕಾಲಗಣನೆ ಎನ್ನುವ ತಮ್ಮ ಕನಸಿನ ಅಭಿಯಾನದಲ್ಲಿ ಯಶಸ್ಸು ಕಂಡಿದ್ದಾರೆ.
ವ್ಯಾವಹಾರಿಕವಾಗಿ ನಾವು ಇಂಗ್ಲೀಷ್ ಕ್ಯಾಲೆಂಡರ್ ಬಳಕೆಗೆ ಒಗ್ಗಿಕೊಂಡಿರಬಹುದು. ಆದರೆ ನಮ್ಮ ಹಬ್ಬ ಹರಿದಿನಗಳಿಗೂ ಈ ಕ್ಯಾಲೆಂಡರಿಗೂ ಸಂಬಂಧವೇನಿಲ್ಲ. ಅವುಗಳೇನಿದ್ದರೂ ತಿಥಿ ಆಧಾರಿತ. ನಮ್ಮ ನಿತ್ಯ ಬದುಕಿನ ಶುಭ ಕಾರ್ಯ, ಸಮಾರಂಭ, ಮುಹೂರ್ತಗಳಿಗೂ ತಿಥಿ, ವಾರ, ನಕ್ಷತ್ರಗಳೇ ಪ್ರಧಾನ. ಜನನ ಮರಣದಲ್ಲೂ ಶ್ರಾದ್ಧ, ಪುಣ್ಯತಿಥಿ ಹೀಗೆ ಆಚರಿಸುವಾಗಲೂ ಪಂಚಾಂಗ ಆಧಾರಿತ ತಿಥಿಗಳು ಮುಖ್ಯವಾಗುತ್ತವೆಯೇ ವಿನಃ ಕ್ಯಾಲೆಂಡರ್ ದಿನಾಂಕಗಳು
ಆಂಗ್ಲ ಸಂಸ್ಕೃತಿಯ ಆನಿವರ್ಸರಿ ಆಚರಣೆಗಷ್ಟೇ ಸೀಮಿತವಾಗುತ್ತವೆ. ಹೀಗೆ ಎಲ್ಲವೂ ಪಂಚಾಂಗ ತಿಥಿ ಆಧರಿಸಿರುವಾಗ ಅದೇ ಹಿನ್ನೆಲೆಯಲ್ಲಿ ಸೌರಮಾನದ ಸಂಕ್ರಾಂತಿ, ಚಾಂದ್ರ ಮಾನದ ಯುಗಾದಿಯೇ ನಮಗೆ ಹೊಸವರ್ಷದ ಆರಂಭ ಎನ್ನುವುದು ಖಚಿತವಿರುವಾಗ ಈಗಿನ ಗ್ರೆಗೋರಿಯನ್ ಕ್ಯಾಲೆಂಡರ್ ಬದಲಾಗಿ ದೇಶೀ ದಿನದರ್ಶಿಕೆಯನ್ನು ನಾವೇಕೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಾರದು? ಎನ್ನುವ ಕಲ್ಪನೆಗೆ ಪೂರಕವಾಗಿ ಅರಳಿದ್ದೇ ಈ ದೇಶೀ ದಿನದರ್ಶಿಕೆ.














