ಬಂಟ್ವಾಳ :ತುಂಬೆಯಂತಹ ಗ್ರಾಮೀಣ ಪ್ರದೇಶದಲ್ಲಿ ಒಂದು ಶಿಸ್ತು ಬದ್ಧವಾದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಹಮ್ಮದ್ ಹಾಜಿ ಮೊಹಿಯುದ್ದೀನ್ ಅವರದು ದೊಡ್ಡ ಸಾಧನೆಯೇ ಸರಿ.ಕಳೆದ ಮೂರ್ನಾಲ್ಕು ದಶಕಗಳ ಪಾಠ-ಪಾಠೇತರ ಪ್ರಗತಿಯನ್ನು ಕಾಣುವಲ್ಲಿ ಅವರಿಗೆ ಇದ್ದ ದೂರದರ್ಶಿತ್ವ ನಿಜಕ್ಕೂ ಪ್ರಶಂಸನೀಯವಾದುದು ಎಂಬುದಾಗಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಮಂಗಳೂರು ಮೆಸ್ಕಾಂ ನ ಹಾಲಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ಹೇಳಿದರು.
ಅವರು ತಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ನ ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಪೂರ್ವ ಕಾಲೇಜಿನ 37ನೇ ವರ್ಷದ ವಾರ್ಷಿಕ ಕ್ರೀಡಾ ಕೂಟ-2025 ನ್ನು ಕ್ರೀಡಾ ಜ್ಯೋತಿ ಬೆಳಗಿಸಿ,ಧ್ವಜಾರೋಹಣ ಗೈದು,ಪಾರಿವಾಳವನ್ನು ಹಾರಿ ಬಿಟ್ಟು ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಮಾತನಾಡುತ್ತಾ ಕ್ರೀಡೆ ಎನ್ನುವುದು ಕಲಿಕೆಯ ಒಂದು ಭಾಗವಾಗಿದೆ. ನೂರಾರು,ಸಾವಿರಾರು ಮಂದಿಗಳ ನಡುವೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸುವುದು ಮಹತ್ವದ ವಿಷಯವೇ ಸರಿ.ಆದರೆ ವಿದ್ಯಾರ್ಥಿ ಜೀವನದಲ್ಲಿ ಸೋತರೆ ಕುಗ್ಗದೆ,ಗೆದ್ದರೆ ಹೆಚ್ಚು ಗರ್ವ ಪಡದೆ ಸಮತೋಲನದಲ್ಲಿ ಮುಂದುವರಿಯಬೇಕು. ಅದು ಭವಿಷ್ಯದ ಜೀವನಕ್ಕೆ ಬೆಳಕಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಅಬ್ದುಲ್ ಸಲಾಂ ಮಾತನಾಡಿ ವಿದ್ಯಾರ್ಥಿಗಳು ಪಾಠ ಮತ್ತು ಪಾಠೇತರ ಚಟುವಟಿಕೆಗಳೆರಡಕ್ಕೂ ಪ್ರಾಧಾನ್ಯತೆ ಕೊಡಬೇಕು.ಅಂತಹ ಪ್ರವೃತ್ತಿ ಉಳ್ಳವರು ಮುಂದೆ ಯಶಸ್ಸು ಗಳಿಸುತ್ತಾರೆ.ಸಿಗುವ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾ ಯಶಸ್ಸಿನ ಗುರಿಯತ್ತ ಮುಖ ಮಾಡಿ ಸಾಗುತ್ತಿರಿ ಎಂದು ಕ್ರೀಡಾಕೂಟ ಕ್ಕೆ ಶುಭ ಹಾರೈಸಿ
ಮಾತನಾಡಿದರು.
ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಪಟು ಮಹಮ್ಮದ್ ಅಯಾನ್ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು.ಕ್ರೀಡಾ ಕಾರ್ಯದರ್ಶಿ ವಾಸುಕಿ ಅಭಯ ಶರ್ಮ ಪ್ರತಿಜ್ಞಾ ವಿಧಿ ಬೋಧಿಸಿದರು.
ತುಂಬೆ ವಿದ್ಯಾ ಸಂಸ್ಥೆಯ ಪಿಟಿಎ ಅಧ್ಯಕ್ಷ ನಿಸಾರ್ ಅಹಮ್ಮದ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಕೆ ಸುವರ್ಣ,ಕಾರ್ಯಕಾರಿ ಸಮಿತಿಯ ಸದಸ್ಯರಾದ ಮ್ಯಾಕ್ಸಿಂ ಕುವೆಲ್ಲೋ,ಶಾಫಿ ಅಮ್ಮೆಮ್ಮಾರ್, ಚಂಚಲಾಕ್ಷಿ,ತುಂಬೆ ವಿದ್ಯಾ ಸಂಸ್ಥೆಯ ಪಿಟಿಎ ಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಸುವರ್ಣ,ತುಂಬೆ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿಯರಾದ ವಿದ್ಯಾ ಕೆ ಹಾಗೂ ಮಲ್ಲಿಕಾ ಶೆಟ್ಟಿ,ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್,ಆಡಳಿತಾಧಿಕಾರಿ ಕಿಶೋರ್ ಸುವರ್ಣ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ ನಾಯಕ್,ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಮತ್ತಿತರರು ಉಪಸ್ಥಿತರಿದ್ದ ಸಮಾರಂಭದಲ್ಲಿ ತುಂಬೆ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಗೈದರು.ಕಾಲೇಜಿನ ಪ್ರಾಂಶುಪಾಲ ವಿ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಬಿ ಜಗದೀಶ್ ರೈ ವಂದಿಸಿ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ ಶೆಟ್ಟಿ ಎಂ ನಿರೂಪಿಸಿದರು.











