ಬಂಟ್ವಾಳ:ಇಲ್ಲಿನ ವಿಟ್ಲದಲ್ಲಿ ದಲಿತ ಬಾಲಕಿಯೊಬ್ಬರ ಮೇಲೆ ಐವರು ಸಂಘ ಪರಿವಾರದ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯ ಬಗ್ಗೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ನೈತಿಕ ಪೊಲೀಸ್ ಗಿರಿ ನಡೆಸುತ್ತಿರುವ ಸಮಾಜ ಘಾತುಕರ ಬಗ್ಗೆ ಬಿಜೆಪಿ ಜನಪ್ರತಿನಿಧಿಗಳು ಮತ್ತು ಬಿಜೆಪಿ ಮುಖಂಡರು ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ಸಿ.ರೋಡು ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈಚೆಗೆ ಬಿ.ಸಿ.ರೋಡು ಪೇಟೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಮಂಗಳೂರಿನಲ್ಲಿ ಪತ್ರಕರ್ತರ ಮೇಲೆ ನೈತಿಕ ಗೂಂಡಾಗಿರಿ ನಡೆಸಲಾಗಿದ್ದು, ಇಂತಹವರನ್ನು ಕೂಡಲೇ ಬಂಧಿಸಿ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೋಮು ದ್ವೇಷ ಸೃಷ್ಟಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತ್ಯೇಕ ಪೊಲೀಸ್ ವಿಂಗ್ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳು ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ
ವೈರಲ್ ಮಾಡುವ ಮೂಲಕ ಬ್ಲ್ಯಾಕ ಮೇಲ್ ತಂತ್ರದಿಂದ ಹೆಣ್ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ನೀಚ ಕೃತ್ಯದ ಬಗ್ಗೆಯೂ ಬಿಜೆಪಿ ಮುಖಂಡರು ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.
ಡ್ರಗ್ಸ್ ಮಾಫಿಯಾ ವಿರುದ್ಧ ಜಾಗೃತಿ ಅಭಿಯಾನ:
ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ಮಾಫಿಯಾ ವಿರುದ್ಧ ಮಾಧ್ಯಮ ಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಬಂಟ್ವಾಳದಿಂದಲೇ ಬೃಹತ್ ಜಾಗೃತಿ ಅಭಿಯಾನ ಕೈಗೆತ್ತಿಕೊಳ್ಳುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಸದಾಶಿವ ಬಂಗೇರ, ಸುರೇಶ ಜೋರ, ಇಬ್ರಾಹಿಂ ಬಡಕಬೈಲು, ಬಾಲಕೃಷ್ಣ ಆಳ್ವ ಕೊಡಾಜೆ ಮತ್ತಿತರರು ಇದ್ದರು.















