ಬಂಟ್ವಾಳ: ಫರಂಗಿಪೇಟೆಯಲ್ಲಿ ಕಳೆದ 70 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸೌತ್‌ಕೆನರಾ ಹೋಮ್ ಇಂಡಸ್ಟ್ರೀಸ್‌ನ್ನು ಪಾಣೆಮಂಗಳೂರಿಗೆ ವರ್ಗಾಯಿಸದಂತೆ ಆಗ್ರಹಿಸಿ ಸಿಐಟಿಯು ಸಂಘಟನೆಯ ಬೆಂಬಲದೊಂದಿಗೆ ಬೀಡಿ ಕಂಟ್ರಾಕ್ಟ್‌ದಾರರ ಸಂಘದ ನೇತೃತ್ವದಲ್ಲಿ ಫರಂಗಿಪೇಟೆಯ ಹಳೆ ರಸ್ತೆಯಲ್ಲಿರುವ ಕಂಪೆನಿಯ ಡಿಪ್ಪೋದ ಮುಂಭಾಗ ಶುಕ್ರವಾರ ಬೆಳಿಗ್ಗೆ ಬೀಡಿ ಗುತ್ತಿಗೆದಾರರು ಪ್ರತಿಭಟನೆ ನಡೆಸಿದರು.
ಸುಮಾರು 70 ವರ್ಷಗಳಿಂದ ಗಣೇಶ್ ಬೀಡಿ ಎಂಬ ಹೆಸರಿನಲ್ಲಿ ಬೀಡಿ ಉದ್ದಿಮೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು ಕೆಲ ವರ್ಷಗಳಿಂದ ಇದರ ಹೆಸರನ್ನು ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್ ಎಂಬ ಹೆಸರಿನಡಿ ಮುಂದುವರೆಸಲಾಗುತ್ತಿದೆ.
ಫರಂಗಿಪೇಟೆ ಡಿಪ್ಪೋಗೆ ಸಂಬಂಧಿಸಿದಂತೆ ಸುಮಾರು ೪೦ಕ್ಕಿಂತಲೂ ಅಧಿಕ ಗುತ್ತಿಗೆದಾರರಿದ್ದು 2ಸಾವಿರಕ್ಕಿಂತಲೂ ಅಧಿಕ ಮಂದಿ ಕಾರ್ಮಿಕರು ಈ ಬೀಡಿ ಕಂಪೆನಿಯನ್ನು ಅವಲಂಬಿಸಿಕೊಂಡು ದುಡಿಯುತ್ತಿದ್ದಾರೆ. ಪ್ರಸ್ತುತ ಕೆಲವೊಂದು ಕ್ಲುಲಕ ಕಾರಣಗಳನ್ನು ನೀಡಿ ಕಂಪೆನಿಯನ್ನು ಪಾಣೆಮಂಗಳೂರಿಗೆ ಸ್ಥಳಾಂತರ ಗೊಳಿಸುವ ಪ್ರಯತ್ನಗಳು ನಡೆದಿದ್ದು ಇದರಿಂದ ಗುತ್ತಿಗೆದಾರರು ಹಾಗೂ ಬೀಡಿ ಕಾರ್ಮಿಕರಿಗೆ ತೊಂದರೆಯಾಗಲಿದೆ. ಬೀಡಿ ಕೆಲಸವನ್ನೇ ಅವಲಂಬಿಸಿರುವ ಅವರ ಬದುಕು ಬೀದಿ ಪಾಲಾಗಲಿದೆ.
ಬೀಡಿ ಎಲೆ ಹಾಗೂ ತಂಬಾಕು ವಸ್ತುಗಳನ್ನು ಸಾರ್ವಜನಿಕ ವಾಹನದಲ್ಲಿ
ಸಾಗಾಟ ಮಾಡಲು ಅವಕಾಶವಿಲ್ಲದೇ ಇರುವುದರಿಂದ ಅಷ್ಟು ದೂರದಿಂದ ಸರಕುಗಳನ್ನು ಬಾಡಿಗೆ ವಾಹನದಲ್ಲಿ ತರಲು ಅಸಾಧ್ಯವಿದೆ. ಆದ್ದರಿಂದ ಕಳೆದ 70 ವರ್ಷಗಳಿಂದ ಇದೇ ಉದ್ಯಮವನ್ನು ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಅನ್ಯಾಯವಾಗದಂತೆ ತಡೆಯಲು ಇದೇ ಬೀಡಿ ಡಿಪೋವನ್ನು ಸ್ಥಳಾಂತರಿಸದೇ ಮುಂದುವರೆಸಿಕೊಂಡು ಹೋಗಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಿಐಟಿಯು ಸಂಘಟನೆಯ ಮುಖಂಡರಾದ ಬಿ.ಎಂ. ಭಟ್, ಬಾಲಕೃಷ್ಣ ಶೆಟ್ಟಿ, , ದ.ಕ., ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟುದಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ ತೊಕ್ಕೊಟ್ಟು, ಫರಂಗಿಪೇಟೆ ಬೀಡಿ ಕಂಟ್ರಾಕ್ಟುದಾರರ ಸಂಘದ ಅಧ್ಯಕ್ಷ ಗೋಪಾಲ ವೀರನಗರ, ಶಿವಪ್ಪ ಸುವರ್ಣ,ಸುಂದರ ಶೆಟ್ಟಿ ಕಲ್ಲತಡಮೆ , ವಿಠ್ಠಲ್ ಶೆಟ್ಟಿ ನೀರೊಲ್ಬೆ, ಲಕ್ಷ್ಮಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.














