ಬಂಟ್ವಾಳ: ಇಲ್ಲಿನ ಮೆಲ್ಕಾರ್ ಪ್ರದೇಶದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹತ್ತು ಅಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬೂಡ ಸದಸ್ಯ ಸಚಿನ್ ಮೆಲ್ಕಾರ್ ನೇತೃತ್ವದಲ್ಲಿ ಪುರಸಭೆಗೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಸರ್ಕಾರಿ ಜಮೀನಿನಲ್ಲಿ ಅಕ್ರಮ ಕಟ್ಟಡ ಕಟ್ಟಿ ಅಂಗಡಿಗಳನ್ನು ಬಾಡಿಗೆಗೆ ನೀಡಿರುವ ಬಗ್ಗೆ ಈಗಾಗಲೇ ಮಂಗಳೂರು ಸಹಾಯಕ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪುರಸಭೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗೂ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅನಧಿಕೃತ ಅಂಗಡಿಗಳ ತೆರವುಗೊಳಿಸಲು ಕೋರ್ಟ್ ಆದೇಶವಿದ್ದರೂ ಇಲ್ಲಿನ ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ ಎಂದು
ಬೂಡ ಸದಸ್ಯ ಸಚಿನ್ ಮೆಲ್ಕಾರ್ ಆರೋಪಿಸಿದರು.
ನಗರ ಠಾಣೆ ಇನ್ಸ್ ಪೆಕ್ಟರ್ ವಿವೇಕಾನಂದ, ಎಸೈ ಅವಿನಾಶ್ ಪ್ರತಿಭಟನಾಕಾರರ ಮನವೊಲಿಸಿ ಬೀಗ ತೆರವುಗೊಳಿಸಿದರು. ಸಹಾಯಕ ಕಮಿಷನರ್ ಮದನ್ ಮೋಹನ್ ಬಂದು ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.
ಪ್ರಮುಖರಾದ ರೂಪೇಶ್ ಆಚಾರ್ಯ, ಲೋಹಿತ್ ಪಣೋಲಿಬೈಲ್, ಗುರುರಾಜ್ ಬಂಟ್ವಾಳ, ಖಾಲಿದ್ ನಂದಾವರ, ಪ್ರಸನ್ನ ಮೆಲ್ಕಾರ್, ಸುದರ್ಶನ್ ಮೆಲ್ಕಾರ್, ಪ್ರದೀಪ್ ಅಜ್ಜಿಬೆಟ್ಟು, ಸುರೇಶ್ ಕೋಟ್ಯಾನ್ ಮತ್ತಿತರರು ಇದ್ದರು.














