ಇರಾ :ಮದುವೆಯ ಸಂಭ್ರಮಕ್ಕೆ ತಣ್ಣೀರೆರಚಿದ ಖತರ್ನಾಕ್ ಕಳ್ಳ ಮದುವೆ ಮನೆಯಿಂದ ಲಕ್ಷಾಂತರ ಮೌಲ್ಯದ ನಗ-ನಗದು ದೋಚಿ ಪರಾರಿ.

Coastal Bulletin
ಇರಾ :ಮದುವೆಯ ಸಂಭ್ರಮಕ್ಕೆ ತಣ್ಣೀರೆರಚಿದ ಖತರ್ನಾಕ್ ಕಳ್ಳ ಮದುವೆ ಮನೆಯಿಂದ ಲಕ್ಷಾಂತರ ಮೌಲ್ಯದ ನಗ-ನಗದು ದೋಚಿ ಪರಾರಿ.

ಬಂಟ್ವಾಳ: ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡಿ‌ ಮನೆಯಲ್ಲಿ ಯಾರನ್ನೋ ನಿಲ್ಲಿಸಿ ಹೋದವರನ್ನು ಯಾಮಾರಿಸಿ ಸುಳ್ಳು ಹೇಳಿ ಕಳ್ಳತನ ಮಾಡುವ ಕೃತ್ಯಗಳ ಹೆಚ್ಚಾಗುತ್ತಿದ್ದು, ರವಿವಾರ ಇರಾ ಗ್ರಾಮವೊಂದರ ಮನೆಗೆ ನುಗ್ಗಿ ನಗ-ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.

ಇರಾ ಗ್ರಾಮದ ಕುರಿಯಾಡಿ ಪದ್ಮನಾಭ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಅವರ ಮಗಳ ಮದುವೆಗಾಗಿ ಮನೆ ಮಂದಿ ಮಂಜೇಶ್ವರ ಪೈವಳಿಕೆಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಇಬ್ಬರು ಮಹಿಳೆಯರನ್ನು ನಿಲ್ಲಿಸಿ ಹೋಗಿದ್ದರು. ಮಧ್ಯಾಹ್ನ 1ರ ಸುಮಾರಿಗೆ ಮನೆಗೆ ಬೈಕಿನಲ್ಲಿ ಬಂದಾತ ಅಂಗಡಿ ಪದ್ಮಣ್ಣ ಅವರು ಮನೆಯಲ್ಲಿ ವಿದ್ಯುತ್ ಸರಿಯಿಲ್ಲ ಎಂದು ದುರಸ್ತಿಗೆ ಬರುವುದಕ್ಕೆ ಹೇಳಿದ್ದಾರೆ ಎಂದು ಹೇಳಿ ಮನೆಯ ಒಳಗೆ ನುಗ್ಗಿದ್ದಾನೆ. 

ಒಳಗೆ ಹೋದಾಗ ವಿದ್ಯುತ್ ಫ್ಯುಸ್ ಗಳನ್ನು ನೋಡಿ ದುರಸ್ತಿಯ ನಾಟಕವಾಡಿದ್ದು, ಮಹಿಳೆಯರನ್ನು ನೆಲದಲ್ಲಿ ನಿಲ್ಲಬೇಡಿ ಮರದ ಮಣೆಯಲ್ಲಿ ನಿಲ್ಲುವಂತೆ ಹೇಳಿದ್ದಾನೆ. ಅಲ್ಲಿಂದ ನೇರವಾಗಿ ಕೋಣೆಗೆ ಹೋಗಿದ್ದು, ಆಗ ಮಹಿಳೆ ಹಿಂದಿನಿಂದ ಹೋದಾಗ ನೀವು ಬರಬೇಡಿ. ಶಾಕ್ ಹೊಡೆಯುತ್ತದೆ ಎಂದು ಹೇಳಿ ಮಹಿಳೆಯರು ಕೋಣೆಗೆ ಬರದಂತೆ ನೋಡಿಕೊಂಡಿದ್ದಾನೆ. 

ಕೋಣೆಗೆ ಹೋದಾತ 20 ಸಾವಿರ ನಗದು ಹಾಗೂ ಸುಮಾರು 2 ಪವನ್ ತೂಕದ ಒಂದು ಜತೆ ಕಿವಿಯ ಬೆಂಡೋಲೆಯನ್ನು ಸೇರಿ ಸುಮಾರು 1.20ಲಕ್ಷ ರೂ ಮೌಲ್ಯದ

ನಗ-ನಗದು ದೋಚಿ ಪರಾರಿಯಾಗಿದ್ದಾನೆ. ಮದುವೆ ಮುಗಿಸಿ ಮನೆಮಂದಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳ ಕೃತ್ಯ ಮುಗಿಸಿ ತೆರಳುವಾಗ ಪಕ್ಕದ ಮನೆಗೂ ವಿದ್ಯುತ್ ದುರಸ್ತಿಗೆ ಬರಲು ಹೇಳಿದ್ದಾರೆ ಎಂದು ಮನೆಯ ಬಳಿ ಹೋಗಿದ್ದು, ಅಲ್ಲಿ ಯಾರೂ ಇಲ್ಲ ಎಂದು ಮಹಿಳೆಯರು ಹೇಳಿದಾಗ ಅಲ್ಲಿಂದ ತೆರಳಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ವಾರದ ಹಿಂದೆಯೂ ನಡೆದಿತ್ತು:

ಇರಾ ಗ್ರಾಮದ ಪಕ್ಕದ ಗ್ರಾಮವಾದ ಸಜೀಪನಡು ಗ್ರಾಮದಲ್ಲೂ ನ. 23ರಂದು ಕೂಡ ಇದೇ ರೀತಿಯ ಕೃತ್ಯ ನಡೆದಿದ್ದು, ದೇರಾಜೆ ನಿವಾಸಿ ದೀಕ್ಷಿತ್ ಅವರ ಮನೆಗೆ ನುಗ್ಗಿದ್ದ ಕಳ್ಳನೋರ್ವ ಮನೆಯಲ್ಲಿದ್ದ ಮಹಿಳೆಯ ಬಳಿ ವಿದ್ಯುತ್ ದುರಸ್ತಿಯ ನಾಟಕವಾಡಿ‌ ಚಿನ್ನಾಭರಣ ದೋಚಿದ್ದಾನೆ. ಇರಾ ಗ್ರಾಮದ ಮನೆಗೂ ಅದೇ ಕಳ್ಳ ನುಗ್ಗಿದ್ದಾನೋ ಅಥವಾ ಇದೇ ರೀತಿಯ ದಂಧೆಯಲ್ಲಿ ತೊಡಗಿರುವ ತಂಡವಿದೆಯೇ ಎಂಬ ಸಂಶಯ ಮೂಡಿದೆ. ಬೇರೆ ಭಾಗದಲ್ಲೂ ಇಂತಹ ಕೃತ್ಯಗಳು ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Comment