ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ರಜತ ಮಹೋತ್ಸವ ಭಾನುವಾರ ಸಂಚಯಗಿರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ ಪರಸ್ಪರ ಸಹಕಾರ ಮನೋಭಾವದಿಂದ ಬಡವಾಣೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಿದೆ ಎನ್ನುವುದನ್ನು ಸಂಚಯಗಿರಿ ತೋರಿಸಿಕೊಟ್ಟಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಂಚಯಗಿರಿ ಪ್ರದೇಶ ಸ್ವಚ್ಛ ಪ್ರದೇಶವಾಗಿ ಗುರುತಿಸಿಕೊಳ್ಳುವಲ್ಲಿ ನಾಗರಿಕ ಕ್ರಿಯಾ ಸಮಿತಿ ಹಾಗೂ ಇಲ್ಲಿನ ಜನರ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಡಾ. ಸೀತಾರಾಮ ಮಯ್ಯ, ಪುರಸಭೆ ಸದಸ್ಯೆ ಜಯಂತಿ ವಸಂತ,
ಗೌರವಾಧ್ಯಕ್ಷ ನರಸಿಂಹ ರಾಜ ಹೊಳ್ಳ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಜತ ಸಂಚಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಾಧಕರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಸತ್ಯನಾರಾಯಣ ಪುಂಚಿತ್ತಾಯ ಅವರಿಂದ ಯಕ್ಷಗಾನ ವೈಭವ ಹಾಗೂ ಸಂಚಯಗಿರಿಯ ಮಕ್ಕಳಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಿತು.
ಸಮಿತಿಯ ಉಪಾಧ್ಯಕ್ಷೆ ಪ್ರಿಯಾಲತಾ, ಕ್ರೀಡಾ ಕಾರ್ಯದರ್ಶಿ ಶೇಖರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ಸಾಲ್ಯಾನ್ ಬಿ. ಸ್ವಾಗತಿಸಿದರು, ಕೋಶಾಧಿಕಾರಿ ಎ. ದಾಮೋದರ ವಂದಿಸಿದರು, ಸಂಕಪ್ಪ ಶೆಟ್ಟಿ ಹಾಗೂ ಸುಧಾಕರ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.














