ಬೆಂಗಳೂರು:ನೂತನ ಸಚಿವ ವಿ.ಸುನಿಲ್ ಕುಮಾರ್, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಭಾರತಮಾತೆ ಮತ್ತು ಕನ್ನಡಾಂಭೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕುಳಿತು ಕಡತಗಳಿಗೆ ಸಹಿ ಮಾಡುವ ಮೂಲಕ ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾಗಿ ಅಧಿಕಾರ ವಹಿಸಿಕೊಂಡರು.
ನಂತರ ಮಾತನಾಡಿದ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿದಿನ ಕನ್ನಡ ಪತ್ರಿಕೆಯನ್ನು ಓದಿ, ತಿಂಗಳಿಗೊಂದು ಕನ್ನಡ ಪುಸ್ತಕ ಕೊಂಡು ಓದುವುದರ ಜತೆಗೆ ಎರಡು ತಿಂಗಳಿಗೊಮ್ಮೆಯಾದರೂ ಕನ್ನಡ ಚಲನಚಿತ್ರ ನೋಡುವ ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನಿಲ್‌ಕುಮಾರ್ ಕರೆ ನೀಡಿದ್ದಾರೆ.
ಈ ಹಿಂದೆ ಸಚಿವರಾದವರು ಸಾಗಿದ ಹಾದಿಯಲ್ಲೇ ಮುನ್ನಡೆಯುತ್ತೇನೆ. ಎಲ್ಲೆಡೆ ಕನ್ನಡದ ವಾತಾವರಣವನ್ನು ಪಸರಿಸುವ ಕೆಲಸ ಮಾಡುತ್ತೇನೆ.ಪವರ್ (ಇಂಧನ)
ಇಲಾಖೆಯಲ್ಲಿ ಸಂಸ್ಕೃತಿ ಇಲಾಖೆಗೆ ಪವರ್ ತುಂಬುವ ಕೆಲಸ ಮಾಡಬೇಕಿದೆ. ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ನಟಿಯರಾದ ಮಾಳವಿಕ , ತಾರಾ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಭಾಗಿಯಾಗಿದ್ದರು.ಅಧಿಕಾರ ಸ್ವೀಕಾರ ಬಳಿಕ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಮಾರಾಟ ಮಳಿಗೆಗೆ ಭೇಟಿ ನೀಡಿದ ಸಚಿವರು ಕನಕಾವಲೋಕನ , ಡಿವಿಜಿ ಅವರ ನೆನಪಿನ ಚಿತ್ರಗಳು ಮತ್ತು ಶಿವರಾಮ ಕಾರಂತರ ನಾಟಕಗಳು ಎಂಬ ಮೂರು ಪುಸ್ತಕಗಳನ್ನು ಖರೀದಿ ಮಾಡಿದರು.















