Coastal Bulletin

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂದಿಸಿದಂತೆ 'ಸಂತ್ರಸ್ತೆ ಆ ಹೊತ್ತಿನಲ್ಲಿ ಅಲ್ಲಿಗೆ ಹೋಗಬಾರದಿತ್ತು' ಎಂದು ನಿನ್ನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿದ ಹೇಳಿಕೆಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರು ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.

' ಗಂಡಸರು ಮಹಿಳೆಯರ ಮೇಲೆ ಎಸಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರ ಆಗಿರಬಹುದು, ದೈಹಿಕ ದೌರ್ಜನ್ಯ ಅಥವಾ ಮೌಖಿಕ ಶೋಷಣೆಯೇ ಆಗಿರಬಹುದು. ನಿನ್ನದೇ ತಪ್ಪು ಎಂದು ಮಹಿಳೆಗೆ ಹೇಳಲಾಗುತ್ತದೆ' ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

“ಇದು ನಿನ್ನ ತಪ್ಪು, ನೀನು ಆ ರೀತಿ ಮಾತನಾಡಬಾರದಿತ್ತು, ನೀನು ಆ ರೀತಿ ಮಾಡಬಾರದಿತ್ತು, ನೀನು ಆ ಉಡುಪನ್ನು ಧರಿಸಬಾರದಿತ್ತು  ತುಂಬ ಬಿಗಿ ಆದಂತಹ, ತುಂಬ ಸಡಿಲ ಆಗಿರುವಂತಹ ಬಟ್ಟೆ ಧರಿಸಬಾರದಿತ್ತು, ತಡರಾತ್ರಿ ನೀನು ಹೊರಗೆ ಹೋಗಬಾರದಿತ್ತು, ಹೊರಗೇ ಹೋಗಬಾರದಿತ್ತು, ಮೇಕ್‌ಅಪ್‌ ಹಾಕಿಕೊಳ್ಳಬಾರದಿತ್ತು, ಯಾಕೆ ಕೆಂಪುಬಣ್ಣದ

ಲಿಪ್‌ಸ್ಟಿಕ್‌, ನೀವು ಕಣ್ಣು ಮಿಟುಕಿಸಬಾರದಿತ್ತು..ಹೀಗೆ ನೀನು ಅದು ಮಾಡಬಾರದಿತ್ತು…ಇದು ಮಾಡಬಾರದಿತ್ತು… ಏಕೆ..? ಏಕೆಂದರೆ ಪುರುಷರು ಯಾವಗಲೂ ಇರುವುದೇ ಹಾಗೆ, ನಾವು ರಾಜಿ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕು- ಇಲ್ಲ. ಇಲ್ಲ… ಇಂಥ ಅಸಂಬದ್ಧವೆಲ್ಲ ಕೊನೆಯಾಗಬೇಕು '. 

' ಪ್ರಾಮಾಣಿಕವಾಗಿ ಹೇಳಬೇಕಂದರೆ ಈ ದೂಷಣೆಯನ್ನು ಒಪ್ಪಿಕೊಳ್ಳುವ ತಪ್ಪನ್ನು ನಾನೂ ಮಾಡಿದ್ದೇನೆ. ಸ್ನೇಹಿತರಿಗೂ ಹೇಳಿದ್ದೇನೆ. ಆದರೆ ಇನ್ಮುಂದೆ ಸಾಧ್ಯವಿಲ್ಲ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ನೋಡಿಕೊಂಡು ಸುಮ್ಮನಿರಬೇಡಿ, ಕುರುಡಾಗದಿರಿ. ಧ್ವನಿ ಎತ್ತಿ’ ಇದು ಇಂದಿಗೆ ಕೊನೆಯಾಗಲಿ ' ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.

Leave a Comment