Coastal Bulletin

ಹೈದರಾಬಾದ್: ತೆಲುಗು ಚಿತ್ರರಂಗದ ದಿಗ್ಗಜ, ಹೆಸರಾಂತ ನಿರ್ದೇಶಕ ಕೆ ವಿಶ್ವನಾಥ್ (92) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಟಾಲಿವುಡ್‌ ಸಿನಿರಂಗದಲ್ಲಿ ‘ಕಲಾ ತಪಸ್ವಿ’  ಎಂದೇ ಬಿರುದಾಂಕಿತರಾಗಿದ್ದ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ ಅವರು ಕಳೆದ ಕೆಲ ಸಮಯದಿಂದ ವಯೋಸಹಜ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಆರೋಗ್ಯದಲ್ಲಿ ಗಂಭೀರಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ನಿಧಣ ಹೊಂದಿದ್ದಾರೆ.

ಸ್ವಾತಿ ಮುತ್ಯಂ, ಸಾಗರ ಸಂಗಮಂ, ಶಂಕರಾಭರಣಂ, ಸಪ್ತಪದಿ, ಸಿರಿವೆನ್ನೆಲ, ಶುಭಲೇಖ, ಶ್ರುತಿಲಯಲು ಸೇರಿದಂತೆ ಹತ್ತು ಹಲವು ಅತ್ಯದ್ಭುತ ತೆಲುಗು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಕೆ ವಿಶ್ವನಾಥ್‌, ಹಿಂದಿ ಭಾಷೆಯಲ್ಲೂ ಈಶ್ವರ್, ಸಂಜೋಗ್, ಸುರ ಸಂಗಮ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಸ್ವರಾಭಿಷೇಕಂ, ಅತಡು, ಠಾಗೂರ್ ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರು, ನಿರ್ದೇಶಕರಾಗಿ, ನಟರಾಗಿ, ಚಿತ್ರಕಥೆಗಾರರಾಗಿಯೂ ತನ್ನದೇ ಆದ ಛಾಪು ಮೂಡಿಸಿ ತೆಲುಗು ಚಿತ್ರರಂಗದಲ್ಲಿ  ಕಲಾ ತಪಸ್ವಿ ಎಂದೇ ಹೆಸರಾಂತರಾಗಿದ್ದರು.

1951ರಲ್ಲಿ ಪಾತಾಳ ಭೈರವಿ ಸಿನಿಮಾದ ಮೂಲಕ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ಕೆ ವಿಶ್ವನಾಥ್, 1965 ರಲ್ಲಿ ‘ಆತ್ಮ ಗೌರವಂ’ ಸಿನಿಮಾದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದರು. ಆ ನಂತರ ಅವರದೇ ನಿರ್ದೇಶನದ ಶಂಕರಾಭರಣಂ ಸಿನಿಮಾ ಸೂಪರ್ ಹಿಟ್ ಆಗಿ ಅವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಅಲ್ಲದೇ

ಶಂಕರಾಭರಣಂ ಸಿನಿಮಾ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ಸಿನಿಮಾ ಕ್ಷೇತ್ರದಲ್ಲಿ ಅನನ್ಯ ಸಾಧನೆಯನ್ನು ಪರಿಗಣಿಸಿ 2017 ರಲ್ಲಿ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದ ಕೆ ವಿಶ್ವನಾಥ್, ಈ ವರೆಗೆ ಒಟ್ಟು 5 ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೇ ಸುಮಾರು 7 ಬಾರಿ ನಂದಿ ಪ್ರಶಸ್ತಿಯನ್ನು ಪಡೆದಿರುವುದಲ್ಲದೇ, ಒಟ್ಟು 10 ಫಿಲಂ ಫೇರ್ ಅವಾರ್ಡ್‌ಗಳು ಜೊತೆಗೆ ಹಿಂದಿ ಸಿನಿಮಾದಲ್ಲೂ ಒಂದು ಫಿಲ್ಮ್ ಫೇರ್ ಅವಾರ್ಡ್‌ನ್ನು ಪಡೆದಿದ್ದಾರೆ. ಕಲಾ ಕ್ಷೇತ್ರದಲ್ಲಿ ಇವರ ಈ ಸಾಧನೆಯನ್ನು ಪರಿಗಣಿಸಿದ ಭಾರತ ಸರ್ಕಾರ 1992ರಲ್ಲಿ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಹೆಸರಾಂತ ನಿರ್ದೇಶಕ ಕೆ ವಿಶ್ವನಾಥ್ ಅವರಿಗೆ ಪ್ರಖ್ಯಾತ ಗಾಯಕ ದಿ.ಎಸ್‌ಪಿ ಬಾಲ ಸುಬ್ರಹ್ಮಣ್ಯಂ, ಎಸ್‌ಪಿ ಶೈಲಜಾ ಹಾಗೂ ನಟ ಚಂದ್ರ ಮೋಹನ್ ಅವರಿಗೆ ಸಂಬಂಧಿಗಳಾಗಿದ್ದಾರೆ.

ಮೂಲಗಳ ಪ್ರಕಾರ ಕೆ ವಿಶ್ವನಾಥ್ ಅವರ ಅಂತ್ಯ ಸಂಸ್ಕಾರ ಸ್ಥಳೀಯ ಸಂಪ್ರದಾಯದಂತೆ ಇಂದು ಸಂಜೆ ನಡೆಯುವ ಸಾಧ್ಯತೆ ಇದ್ದು, ಬೆಳಗ್ಗೆಯಿಂದ ಮೃತ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಕೆ ವಿಶ್ವನಾಥ್ ಅವರ ನಿರ್ದೇಶನದಲ್ಲಿ ನಟಿಸಿದ ದಿಗ್ಗಜ ಕಲಾವಿದರು ಸೇರಿದಂತೆ ತೆಲುಗು ಚಿತ್ರರಂಗ ಮಾತ್ರವಲ್ಲದೇ ಇತರ ಸಿನಿಮಾ ರಂಗದ ನಟ ನಟಿಯರು ಕೂಡ ಅಂತಿಮ ದರ್ಶನ ಪಡೆಯಲಿದ್ದಾರೆ. ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎನ್ನಲಾಗಿದೆ.

Leave a Comment