Coastal Bulletin

ಮಂಗಳೂರು: ಕರಾವಳಿ‌ ಭಾಗದ‌ ಅಡಿಕೆ ಬೆಳೆಗಾರರಿಗೆ ಈಗ ಸಂಭ್ರಮದ ಸುಗ್ಗಿ. ಕಳೆದ ಒಂದು ವರ್ಷದಲ್ಲಿ ಚಾಲಿ ಅಡಿಕೆ ಧಾರಣೆ ದುಪ್ಪಟ್ಟಾಗಿದೆ.ನಾಗಲೋಟದಿಂದ ಮೇಲೇರುತ್ತಿರುವ ಅಡಿಕೆ ಬೆಲೆಯಿಂದಾಗಿ ಅಡಿಕೆ ಬೆಳೆಗಾರರು ಫುಲ್ ಖುಷ್ ಆಗಿದ್ದಾರೆ.

ದಕ್ಷಿಣ ಕನ್ನಡ,ಉಡುಪಿ,ಕಾಸರಗೋಡು ಜಿಲ್ಲೆಯಲ್ಲಿ‌ ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಇದೀಗ ಈ ವಾಣಿಜ್ಯ ಬೆಳೆ ಅಡಿಕೆಗೆ ಬಂಗಾರದ ಬೆಲೆ ಸಿಗುತ್ತಿದೆ.ಅಡಿಕೆ ದರ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಏರಿಕೆ ಕಂಡಿದೆ.

ಕಳೆದ ವರ್ಷ ಡಬಲ್ ಚೋಲ್ ಗೆ ಕೆಜಿಗೆ ಸುಮಾರು 350 ರಿಂದ 360 ರೂ.ಗಳಿತ್ತು, ಹೊಸ ಅಡಿಕೆಗೆ 250 ರಿಂದ‌ 260 ರೂ.ಗೆ ಖರೀದಿ ಆಗಿತ್ತು. ಆದರೀಗ  ಮಾರುಕಟ್ಟೆಯಲ್ಲಿ ಡಬಲ್ ಚೋಲ್ ಗೆ 520 ರೂ. ಆಗಿದ್ದು, ಹೊಸ ಅಡಿಕೆಗೆ 420ರೂ. ಆಗಿದೆ.ಈಗ 9 ತಿಂಗಳ ಅವಧಿಯಲ್ಲಿ ಹೊಸ ಅಡಿಕೆಗೆ 160 ರೂ. ಹಾಗೂ ಹಳೆ ಅಡಿಕೆಗೆ 170 ರೂ. ಏರಿಕೆ ಕಂಡು ಸಾರ್ವಕಾಲಿಕ ದಾಖಲೆಯ ಬೆಲೆ ಬಂದಿದೆ.

ಅಡಿಕೆ ದರ ಹೆಚ್ಚಳಕ್ಕೆ ಕಾರಣಗಳು

೧.ದೇಶದ

ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇಂಡೋನೇಷಿಯಾ, ಮಯನ್ಮಾರ್ ಮತ್ತು ನೇಪಾಳ ಮುಂತಾದ ಹೊರ ದೇಶಗಳಿಂದ ಬರುತ್ತಿದ್ದ ಕಳಪೆ ಗುಣಮಟ್ಟದ ಅಕ್ರಮ ಅಡಿಕೆ ಆಮದಿಗೆ ಕಡಿವಾಣ ಹಾಕಿದ್ದು ಪ್ರಮುಖ ಕಾರಣ.

೨.ಕಳೆದ ಬಾರಿ ಅಡಿಕೆ ಬೆಳೆ ಶೇಕಡಾ 40ರಷ್ಟು ಕಡಿಮೆಯಾಗಿದೆ. ಮಳೆ ಸರಿಯಾಗಿ ಬಾರದಿರುವುದು ಮತ್ತು ಕೊಳೆರೋಗದಿಂದಲೂ ಬೆಳೆ ಸಾಕಷ್ಟು ಹಾನಿಗೀಡಾಗಿರುವುದರಿಂದ ಸುಪಾರಿ ಮತ್ತು ಇತರ ಬಳಕೆಗೆ ಉತ್ತರ ಭಾರತದಲ್ಲಿ ಅಡಿಕೆ ಬೇಡಿಕೆ ಹೆಚ್ಚಾಗಿದ್ದುದು. 

೩.ಬೆಲೆ ಮತ್ತಷ್ಟು ಏರಿಕೆಯಾಗಬಹುದೆಂದು ದೊಡ್ಡ ದೊಡ್ಡ ಅಡಿಕೆ ಬೆಳೆಗಾರರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ.ಬೇಡಿಕೆಯನ್ನು ಪೂರೈಕೆ ಸರಿಗಟ್ಟಲು ಸಾಧ್ಯವಾಗದೆ ಇರುವುದರಿಂದ ಧಾರಣೆ ಏರುಗತಿಯಲ್ಲೇ ಸಾಗುತ್ತಿದೆ.ಇವೆಲ್ಲವೂ ಧಾರಣೆ ಹೆಚ್ಚಳಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ.

ಕೊರೋನಾ ಕಾಲದಲ್ಲೇ ಅಡಿಕೆಗೆ ಬಂಗಾರದ ಬೆಲೆ ಬಂದಿರುವುದು ಬೆಳೆಗಾರರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

Leave a Comment