Coastal Bulletin

ಅಡಿಕೆ ಕರಾವಳಿ ಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುವ ಒಂದು ಕೃಷಿಯೋತ್ಪನ್ನ.

ಅಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ಯಾನಿನ್ ಎಂಬ ಅಂಟಿನಂತಹ ಕೆಂಪು ಬಣ್ಣದ ಸಾರ ಹೇರಳವಾಗಿದೆ. 31.31% ತೇವಾಂಶ, 4.9% ಪ್ರೋಟಿನ್ ಹಾಗೂ 11.2% ನಾರಿನಾಂಶವಿದೆ ಮತ್ತು ಅಧಿಕ ಪ್ರಮಾಣದ ಖನಿಜಾಂಶವಿದೆ. ಅದರಲ್ಲೂ ಉತ್ತಮ ಪ್ರಮಾಣದಷ್ಟು ಕ್ಯಾಲ್ಶಿಯಂ, ಜೀವಸತ್ವಗಳಾದ ವಿಟಮಿನ್ ಬಿ6 , ವಿಟಮಿನ್ ಸಿ ಅಡಿಕೆಯಲ್ಲಿದೆ. ಅದ್ದರಿಂದ ಅಡಿಕೆಯ ಸೇವನೆಯಿಂದ ಅಗತ್ಯ ಪೋಷಕಾಂಶಗಳು ಹಾಗೂ ಕ್ಯಾಲ್ಶಿಯಂ , ವಿಟಮಿನ್ ನಂತಹ ಜೀವಸತ್ವಗಳು ದೇಹಕ್ಕೆ ಲಭ್ಯವಾಗುತ್ತದೆ.

ಅಡಿಕೆಯು ಒಗರು ಅಥವಾ ಕಷಾಯ ರುಚಿಯಾಗಿದ್ದು, ಕೆಮ್ಮು, ಕಫ, ಜಂತುಬಾಧೆ, ಬೊಜ್ಜು, ರಕ್ತಹೀನತೆ, ಬಾಯಿಹುಣ್ಣು, ದಂತರೋಗಗಳು, ಹುಳಿತೇಗು, ಅತಿಮೂತ್ರದಂತಹ ರೋಗಗಳಿಗೆ ಉತ್ತಮ ಔಷಧಿಯಾಗಿದೆ.

ಅಡಿಕೆಯ ಸೇವನೆಯಿಂದ ಬಾಯಲ್ಲಿನ ಅತಿಯಾದ ಲಾಲಾರಸ(ಜೊಲ್ಲು) ಕಡಿಮೆಯಾಗುತ್ತದೆ. ಬಾಯಿಯ ದುರ್ವಾಸನೆ, ಬಾಯಿಹುಣ್ಣು ಶಮನಗೊಂಡು, ಬಾಯಿ ಮತ್ತು ಗಂಟಲು ಶುದ್ದವಾಗುತ್ತದೆ. ಆಹಾರ ರುಚಿಸುತ್ತದೆ. ಹಲ್ಲುಗಳಲ್ಲಿನ ಸೋಂಕು, ಹಲ್ಲು ನೋವು ಮತ್ತು ಹಲ್ಲಿನ ಹುಳುಕಿಗೆ ಅಡಿಕೆಯ

ಕಷಾಯ ಉತ್ತಮ ಔಷಧಿ. ಹಲ್ಲುಗಳಮೇಲೆ ಆಗುವ ಪದರವನ್ನು ನಿವಾರಿಸಿ, ಹಲ್ಲುಗಳ ಹೊಳಪನ್ನು ವೃದ್ದಿಸುತ್ತದೆ ಮತ್ತು ಒಸಡುಗಳಲ್ಲಾಗುವ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ.

ಅಡಿಕೆಯನ್ನು ಊಟದ ನಂತರ ಸೇವಿಸುವುದರಿಂದ, ಆಹಾರವನ್ನು ಜೀರ್ಣಗೊಳಿಸಲು ಸಹಕಾರಿಯಾಗುತ್ತದೆ. ಅತಿಯಾದ ಭೋಜನದ ನಂತರ ಆಗುವ ಆಲಸ್ಯ, ಅಜೀರ್ಣ, ಹೊಟ್ಟೆ ಉಬ್ಬರದಂತಹ ಲಕ್ಷಣಗಳನ್ನು ತಡೆಯುತ್ತದೆ. ಪಿತ್ತವನ್ನು ಶಮನ ಮಾಡುವ ಗುಣದಿಂದಾಗಿ ಹೊಟ್ಟೆ ಉರಿ, ಪಿತ್ತವಿಕಾರಗಳಲ್ಲಿ ಅಡಿಕೆಯು ದಿವ್ಯೌಷಧಿ.ಕಷಾಯ ರಸದಿಂದಾಗಿ ರಕ್ತಸ್ರಾವವನ್ನು ತಡೆಯುವ ವಿಶಿಷ್ಠ ಗುಣ ಅಡಿಕೆಗಿದೆ. ಆದ್ದರಿಂದ ರಕ್ತಸ್ರಾವ, ಬಿಳಿಸೆರಗು, ಬಾಯಿಹುಣ್ಣು, ಒಸಡಿನ ರಕ್ತಸ್ರಾವದಲ್ಲಿ ಉಪಯುಕ್ತ.

 ಹಲವು ಸಂಶೋಧನೆಯ ಪ್ರಕಾರ ಅಡಿಕೆಯಲ್ಲಿ ಜಂತುನಾಶಕ ಅಂಶವಿದ್ದು, ರಕ್ತವನ್ನು ಶುದ್ದಿಗೊಳಿಸುತ್ತದೆ.ಆದ್ದರಿಂದ ಜಠರ ಹಾಗೂ ಕರುಳಿನ ಹಲವು ಜಂತುಗಳಿಗೆ, ಇಸುಬು, ಫಂಗಸ್ ನ ಸೋಂಕುಗಳಲ್ಲಿ, ಹಲವು ಚರ್ಮವ್ಯಾಧಿಗೆ ಅಡಿಕೆಯ ಕಷಾಯ ರಾಮಬಾಣ.

ಅಡಿಕೆಯ ಚೂರ್ಣವನ್ನು ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ವಾಂತಿ ಮತ್ತು ವಾಂತಿ ಬಂದಂತಾಗುವ ಲಕ್ಷಣ ಕಡಿಮೆಯಾಗುತ್ತದೆ.

Leave a Comment