ಉಡುಪಿ: ಉಡುಪಿ ಪೇಜಾವರ ಮಠಾದೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಚೆನ್ನೈ ಪ್ರವಾಸದಲ್ಲಿದ್ದು, ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಅವರು ಚೆನ್ನೈ ನ ಮಠದಲ್ಲಿ ಯೋಗಾಭ್ಯಾಸ ಮಾಡಿದರು. ಮಠದಲ್ಲಿ ದೇವರ ಗರ್ಭಗುಡಿಯ ಮುಂಭಾಗ ಸ್ವಾಮೀಜಿ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರು.
ಮಠದ ಶಿಷ್ಯರು ಪೇಜಾವರ ಶ್ರೀಗಳಿಗೆ ಸಾತ್ ನೀಡಿದರು. ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಕಾಪಾಡಲು ಯೋಗ ಅತ್ಯವಶ್ಯಕ. ಎಲ್ಲರೂ ಸೂರ್ಯ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಪೇಜಾವರ ಶ್ರೀಗಳು ಹೇಳಿದರು.
ಅರವತ್ತರ ಹರೆಯದಲ್ಲೂ ಪೇಜಾವರ ಶ್ರೀಗಳು, ಯುವಕರು ನಾಚುವಷ್ಟು ಸಕ್ರಿಯರಾಗಿರುತ್ತಾರೆ.
ಕೇವಲ ಸಾಮಾನ್ಯ ಆಸನಗಳು ಮಾತ್ರವಲ್ಲದೆ ಅತ್ಯಂತ ಕಠಿಣ ಯೋಗಾಸನಗಳನ್ನು ಮಾಡುವುದರಲ್ಲೂ ವಿಶ್ವ ಪ್ರಸನ್ನ ತೀರ್ಥರು ಸಿದ್ದಹಸ್ತರು. ಶ್ರೀಗಳು ಸ್ವತಃ ಯೋಗ ಪಟು ಆಗಿದ್ದು, ತಮ್ಮ ದೈನಂದಿನ ಚಟುವಟಿಕೆಗಳ ನಡುವೆ ಸಮಯ ಸಿಕ್ಕಷ್ಟು ಕಾಲ ಅವರು ಯೋಗಾಭ್ಯಾಸ ಮಾಡುತ್ತಾರೆ.















