ಮಂಗಳೂರು : ಯಕ್ಷರಂಗದ ಹಿರಿಯ ಚೇತನ,ಸಂಪಾಜೆ ಶೀನಪ್ಪ ರೈ(78 )ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಸುಮಾರು 55 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಿಭಿನ್ನ ಕಲಾನೈಪುಣ್ಯತೆಯನ್ನು ಮೆರೆಸಿದ ತೆಂಕು ತಿಟ್ಟಿನ ಹೆಸರಾಂತ ಕಲಾವಿದರಾದ ಶ್ರೀ ಸಂಪಾಜೆ ಶೀನಪ್ಪ ರೈಯವರು ಯಕ್ಷರಂಗದಲ್ಲಿ ರಕ್ತಬೀಜ, ಹಿರಣ್ಯಾಕ್ಷ ,ಶಿಶುಪಾಲ ಮುಂತಾದ ಎದುರು ವೇಷಗಳಿಗೆ ಹೊಸ ಭಾಷ್ಯವನ್ನು ಬರೆದವರು.ಶ್ರೀ ಕಟೀಲು ಮೇಳದಲ್ಲಿ ಹಲವು ದಶಕಗಳ ತಿರುಗಾಟವನ್ನು ಮಾಡಿದ ರೈಗಳು ಹೊಸನಗರ ,ಎಡನೀರು ಹಾಗೂ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯವನ್ನು
ಮಾಡಿ ಎರಡು ಮೂರು ವರ್ಷಗಳ ಮೊದಲು ತಿರುಗಾಟಕ್ಕೆ ಮಂಗಳವನ್ನು ಹಾಡಿದರು. ಇರುಳಿನ ರಂಗಸ್ಥಳದಲ್ಲಿ ಅಬ್ಬರದ ರಕ್ಕಸವೇಷಗಳಿಂದ ಯಕ್ಷ ಪ್ರೇಮಿಗಳನ್ನು ರಂಜಿಸುತ್ತಿದ್ದ ಶೀನಪ್ಪ ರೈಗಳು ವೃದ್ಧಾಪ್ಯದ ಕಾಲದಲ್ಲಿ ದೇಹದ ಅನಾರೋಗ್ಯಕ್ಕೆ ತುತ್ತಾಗಿ ಕಷ್ಟ ಪಡುವಂತಾಯಿತು. ಸಂಪಾಜೆಯವರಾದರೂ ಕೂಡ ಮಂಗಳೂರು ಬಳಿಯ ತನ್ನ ಪುತ್ರನ ಮನೆಯಲ್ಲಿ ಜೀವಿತದ ಕೊನೆಯ ಕಾಲವನ್ನು ಕಳೆದ ಸಂಪಾಜೆ ಶೀನಪ್ಪ ರೈಗಳು ಇನ್ನು ನೆನಪು ಮಾತ್ರ.















