ಬೆಂಗಳೂರು : ರಾಜ್ಯ ಸರ್ಕಾರವು ಜುಲೈ ತಿಂಗಳಲ್ಲಿ ಚಿಕ್ಕಮಗಳೂರು, ಹಾವೇರಿ ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಗೋಶಾಲೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ.
ರಾಜ್ಯ ಸರ್ಕಾರವು ಗೋವುಗಳನ್ನು ರಕ್ಷಿಸಲು ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲು ನಿರ್ಧರಿಸಿದ್ದು, ಪ್ರಸ್ತುತ ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಜುಲೈ ತಿಂಗಳಲ್ಲಿ ಗೋಶಾಲೆ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಯುತ್ತಿದೆ.
ಈ ಗೋಶಾಲೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದು ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಕೊಟ್ಟಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಗೋವುಗಳ ಆರೋಗ್ಯದ ಮೇಲೆ ನಿಗಾವಹಿಸಲು ಪಶುವೈದ್ಯಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿಯೊಂದು ಗೋಶಾಲೆ ಪ್ರಾರಂಭ ಮತ್ತು ನಿರ್ವಹಣೆಗೆ 50 ಲಕ್ಷ ರೂ. ಗಳನ್ನು ಸರ್ಕಾರ ನಿಗದಿಪಡಿಸಿದೆ. ಪ್ರತಿಯೊಂದು ಗೋಶಾಲೆಗಳಲ್ಲಿ 100 ರಿಂದ 150 ಗೋವುಗಳ ಪೋಷಣೆಗೆ ಅಗತ್ಯವಿರುವಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
















