ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಾಣ ಗೌಡ ಅವರನ್ನು ರಾತ್ರೋರಾತ್ರಿ ಬಂಧಿಸಲಾಗಿದೆ.ಇಂದು ಬೆಳಗಿನ ಜಾವ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನಾರಾಯಣಗೌಡರು ಸೇರಿದಂತೆ ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಎಲ್ಲಾ ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಬಂಧನದ ಬೆನ್ನಲ್ಲೇ ಎಲ್ಲಾ ಸಚಿವರ ನಿವಾಸ ಮುಂದೆ ಪ್ರತಿಭಟನೆ ನಡೆಸುವಂತೆ ನಾರಾಯಣಗೌಡರು ಕರೆ ಕೊಟ್ಟಿದ್ದಾರೆ. ಬೆಳಗ್ಗಯಿಂದ ಊಟ ನೀಡಿಲ್ಲ, ಔಷಧಿಯನ್ನು ನೀಡಿಲ್ಲ. ನನ್ನ ಮೊಬೈಲ್ ಕಸಿದು ನೋವುಂಟು ಮಾಡಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಕಾರ್ಯಕರ್ತರನ್ನ ಬಂಧನ ಮಾಡಿದ್ದಾರೆ ಎಂದು ನಾರಾಯಣಗೌಡರು ಆರೋಪಿಸಿದ್ದಾರೆ.
ಪ್ರತಿಭಟನೆ ಹಿನ್ನಲೆ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸ್ ವಾಹನ ಚಾಲನಾ ಮತ್ತು ಸಂರಕ್ಷಣ ಶಾಲಾ ಒಳ ಭಾಗದಲ್ಲಿ ಪ್ರತಿಭಟನಕಾರರನ್ನು ಇರಿಸಲಾಗಿತ್ತು.ರಾತ್ರಿ 1.40 ಕ್ಕೆ ಕರವೇ ಅಧ್ಯಕ್ಷ ಸೇರಿ ಕೆಲ ಪ್ರತಿಭಟನಾಕಾರರನ್ನ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಧ್ಯ ರಸ್ತೆಯಲ್ಲಿ ಬಸ್ಸನ್ನ ತಡೆದು ಪ್ರತಿಭಟನಕಾರರು ಪ್ರತಿಭಟಿಸಿ ಕರವೇ ಅಧ್ಯಕ್ಷರನ್ನ ಬಿಡುವಂತೆ ಆಗ್ರಹಿಸಿದ್ದರು.ಕರವೇ ನಾರಾಯಣಗೌಡರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, (
IPC 353) ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ವಿಚಾರವಾಗಿ ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯ ಸಾದಹಳ್ಳಿ ಬಳಿ ಕಾರ್ಯಕರ್ತರು, ಇಂಗ್ಲಿಷ್ ಬೋರ್ಡ್ ಗಳನ್ನು (English Board) ಧ್ವಂಸಗೊಳಿಸಿದ್ದಾರೆ. ಹೆದ್ದಾರಿಯ ಬದಿಯ ದೊಡ್ಡ ದೊಡ್ಡ ಹೋಲ್ಡರ್ ಗಳ ಮೇಲೆ ಹತ್ತಿದ ಕಾರ್ಯಕರ್ತರು ಇಂಗ್ಲಿಷ್ನಲ್ಲಿ ಹಾಕಲಾಗಿರುವ ಫಲಕಗಳನ್ನು ಧ್ವಂಸಗೊಳಿಸಿದ್ದಾರೆ. ಮಾಲ್ಗಳ ಮುಂದೆ ಇರೋ ಇಂಗ್ಲಿಷ್ ಬೋರ್ಡ್ ಇರೋ ಕಾರಣ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.














