1ನೇ ತರಗತಿ ಪ್ರವೇಶ | 6 ವರ್ಷ ಕಡ್ಡಾಯ ನಿಯಮದಲ್ಲಿ 60 ದಿನಗಳ ವಿನಾಯಿತಿ

Coastal Bulletin
1ನೇ ತರಗತಿ ಪ್ರವೇಶ | 6 ವರ್ಷ ಕಡ್ಡಾಯ ನಿಯಮದಲ್ಲಿ 60 ದಿನಗಳ ವಿನಾಯಿತಿ

ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಆರು ವರ್ಷ (6 Years) ತುಂಬಿರಬೇಕೆಂಬ ಕಡ್ಡಾಯ ನಿಯಮದಲ್ಲಿ ಸರ್ಕಾರ ಈ ವರ್ಷವೂ 60 ದಿನಗಳ ವಿನಾಯಿತಿ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ.

ವಿಧಾನಸಭೆಯಲ್ಲಿಂದು ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮಹತ್ವದ ಘೋಷಣೆ ಮಾಡಿದರು. ಒಂದನೇ ತರಗತಿಗೆ ದಾಖಲಾಗಲು ಆರು ವರ್ಷ ತುಂಬಿರಬೇಕೆಂಬ ನಿಯಮದಲ್ಲಿ 2026-27 ನೇ ವರ್ಷದ ಶೈಕ್ಷಣಿಕ ವರ್ಷದಲ್ಲಿ 60 ದಿನಗಳ ಸಡಿಲಿಕೆ ಕೊಡುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಈ ನಿರ್ಧಾರದಿಂದ 5 ವರ್ಷ 10 ತಿಂಗಳು ಅಥವಾ ಅದರ ಮೇಲೆ ವಯಸ್ಸಾಗಿರುವ ಮಕ್ಕಳೂ ಸಹ ಈ ವರ್ಷ ಒಂದನೇ ತರಗತಿಗೆ ದಾಖಲಾಗಬಹುದು. ಈ ಸಡಿಲಿಕೆ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗೆ ಅನ್ವಯವಾಗಲಿದೆ.

ಮಕ್ಕಳ ಪೋಷಕರು ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ

ಹೋರಾಟ ನಡೆಸುತ್ತಿದ್ದರು. ಸಿಎಂ, ಡಿಸಿಎಂ, ಶಿಕ್ಷಣ ಸಚಿವರ ಮನೆಗಳಿಗೆ ಪದೇಪದೇ ಹೋಗಿ ಒತ್ತಾಯ ಮಾಡುತ್ತಿದ್ದರು. ಈಗ ಸರ್ಕಾರದ ನಿರ್ಧಾರದಿಂದ ಈ ಮಕ್ಕಳ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಪ್ರತೀ ಬಾರಿಯೂ ಈ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಕಾನೂನು ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದುವರೆಗೆ ಎಲ್‌ಕೆಜಿ, ಯುಕೆಜಿಗೆ ರೆಗ್ಯುಲೇಟರಿ ನಿಯಮ ಇರಲಿಲ್ಲ. ಇದಕ್ಕಾಗಿ ಹೊಸ ಕಾನೂನು ತಂದು ಎಲ್‌ಕೆಜಿ, ಯುಕೆಜಿಯಲ್ಲೇ ದಾಖಲಾತಿಗೆ ವಯೋಮಿತಿ ನಿಗದಿ ಮಾಡಿ ಸ್ಪಷ್ಟತೆ ಕೊಡಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡನೆ ಮಾಡಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

Leave a Comment