ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಇದೀಗ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನು ವಾಪಸ್ ಕೇಳಿದೆ. ಈ ಸಂಬಂಧ ಚಿಕ್ಕಮಗಳೂರಿನ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿರುವ, ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತವು ಕಣ್ಣನ್ ಅವರ ವೇತನ ತಡೆಹಿಡಿದು ಈ ನೋಟಿಸ್ ನೀಡಿದ್ದು ಸರಕಾರದ ಖಜಾನೆ ಖಾಲಿಯಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡುತ್ತಿದೆ.
ದೇವಾಲಯದ ಆದಾಯ ಕಡಿಮೆ ಇರುವುದರಿಂದ ಸರ್ಕಾರ ನೀಡಿದ ಸಂಬಳ ವಾಪಸ್ ನೀಡುವಂತೆ ತಿಳಿಸಲಾಗಿದೆ. ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಜಮೆಯಾಗುತ್ತಿತ್ತು. ಇದೀಗ 7,500 ರೂ. ಸಂಬಳದಲ್ಲಿ 4,500 ವಾಪಸ್ ನೀಡಲು ಸೂಚನೆ ನೀಡಲಾಗಿದೆ. 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಹಿರೇಮಗಳೂರು ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಸಂಬಳ ಜಮೆಯಾಗುತ್ತಿತ್ತು. 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ರೂ. ಅಂತೆ 10 ವರ್ಷದ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿದೆ. ಸದ್ಯ ಪ್ರತಿ ತಿಂಗಳ ಬರುತ್ತಿದ್ದ
ಸಂಬಳವನ್ನು ತಡೆ ಹಿಡಿಯಲಾಗಿದ್ದು, ಮೇಲಾಧಿಕಾರಿಗಳ ಸೂಚನೆ ಮೇರೆಗೆ ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ವ್ಯಾಪಕ ಟೀಕೆಗೆ ಗುರಿಯಾಗಿದೆ.ಕಣ್ನನ್ ಅವರ ವೇತನ ವಾಪಸ್ ಕೇಳುವ ಮೂಲಕ ಆಕ್ರೋಶಕ್ಕೆ ಗುರಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಎಚ್ಚೆತ್ತುಕೊಂಡಿದ್ದು ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಥಳೀಯ ತಹಶೀಲ್ದಾರ್ ತಪ್ಪು ತೀರ್ಮಾನದಿಂದ ನೋಟಿಸ್ ಜಾರಿಯಾಗಿದೆ. ಅದನ್ನು ಹಿಂಪಡೆಯುತ್ತೇವೆ ಎಂದರು.














