ಬೆಂಗಳೂರು: ಕುಸುಮ್ ಬಿ ಯೋಜನೆಯಲ್ಲಿ 40 ಸಾವಿರ ಪಂಪ್ ಸೆಟ್ಗಳಿಗೆ ಅನುಮೋದನೆ ನೀಡಲಾಗಿದ್ದು, ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕುಸುಮ್ ಬಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು. ಈ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಪ್ರಮುಖ ಮುಖ್ಯಾಂಶಗಳು ಹೀಗಿವೆ:
ಕುಸುಮ್ ಬಿ ಯೋಜನೆಯಡಿ ಸೋಲಾರ್ ಕೃಷಿ ಪಂಪ್‌ಸೆಟ್ ಅಳವಡಿಸಲು ಕೇಂದ್ರ ಸರ್ಕಾರ ಶೇ.30, ರಾಜ್ಯ ಸರ್ಕಾರ ಶೇ.50ರಷ್ಟು ಸಬ್ಸಿಡಿ ಒದಗಿಸುತ್ತಿದ್ದು, ಫಲಾನುಭವಿಗಳು ಶೇ.20ರಷ್ಟು ಭರಿಸಬೇಕಿದೆ.
25 ಸಾವಿರ ರೈತರು ಹೆಚ್ಚುವರಿಯಾಗಿ ಕುಸುಮ್ ಬಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಯೋಜನೆಯಡಿ ರಾಜ್ಯ ಸರ್ಕಾರ 752 ಕೋಟಿ ರೂ. ವೆಚ್ಚ ಮಾಡಲಿದೆ. ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ಮೊತ್ತ ಕಡಿಮೆಯಾಗಲಿದೆ.
4.5 ಲಕ್ಷ ಅನಧಿಕೃತ ಐಪಿ ಸೆಟ್‌ಗಳ ಪೈಕಿ 2 ಲಕ್ಷ ಐಪಿ ಸೆಟ್ ಸಂಪರ್ಕ ಅಧಿಕೃತಗೊಳಿಸಲಾಗಿದೆ. ಈ ಅನಧಿಕೃತ ಐಪಿ ಸೆಟ್‌ಗಳನ್ನು ಕುಸುಮ್ ಬಿ ಯೋಜನೆಯಡಿ ಆದ್ಯತೆ ಮೇರೆಗೆ ತರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ರೈತರಿಗೆ ಸ್ವಯಂ ವಿದ್ಯುತ್ ಮೂಲಸೌಕರ್ಯ
ಕಲ್ಪಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಟ್ರಾನ್ಸ್ ಫಾರ್ಮರ್ಗಳನ್ನು ಇಲಾಖೆ ಒದಗಿಸಲಿದೆ.
ನೀರಾವರಿ ಪಂಪ್ ಸೆಟ್ಗಳಿಗೆ 2024-25ರ ಸಾಲಿನಲ್ಲಿ 12,785 ಕೋಟಿ ರೂಪಾಯಿಗಳ ಅನುದಾನ ಹಂಚಿಕೆ ಆಗಿದ್ದು, ಫೆಬ್ರವರಿ 2025ರ ವರೆಗೆ ರೂ.11,720 ಕೋಟಿ ಬಿಡುಗಡೆ ಆಗಿದೆ. 2025-26ರಲ್ಲಿ 16,021ಕೋಟಿ ರೂಪಾಯಿಗಳ ಆಯವ್ಯಯ ಹಂಚಿಕೆ ಆಗಿದೆ.
ಕುಸುಮ್ ಬಿ ಯೋಜನೆ ಬಗ್ಗೆ ಮಾಹಿತಿ: ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಕುಸುಮ್ ಬಿ ಯೋಜನೆಯಡಿ ಸೌರ ಪಂಪ್‌ಸೆಟ್ ಬಳಕೆಗೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ.
ಕುಸುಮ್ ಬಿ ಯೋಜನೆ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್ ಸೆಟ್ ಅಳವಡಿಕೆಯನ್ನು ರೈತರ ಸಮೂಹಗಳಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರ ಶೇ.50ರಷ್ಟು ಸಹಾಯಧನ ನೀಡುತ್ತಿದೆ. ಇನ್ನು ಕೇಂದ್ರ ಸರ್ಕಾರ ಶೇ.30 ರಷ್ಟು ಹಣ ನೀಡುತ್ತದೆ. ಒಟ್ಟಾರೆ ಮೊತ್ತದಲ್ಲಿ ಶೇ.20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಅಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಾಗುತ್ತದೆ.















