ವಿಜಯೇಂದ್ರ ಭ್ರಷ್ಟ, ಆತನ ನಾಯಕತ್ವಕ್ಕೆ ನನ್ನ ವಿರೋಧ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ರಮೇಶ್ ಜಾರಕಿಹೊಳಿ ಕಿಡಿ

Coastal Bulletin
ವಿಜಯೇಂದ್ರ ಭ್ರಷ್ಟ, ಆತನ ನಾಯಕತ್ವಕ್ಕೆ ನನ್ನ ವಿರೋಧ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ರಮೇಶ್ ಜಾರಕಿಹೊಳಿ ಕಿಡಿ

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನಾನೆಂದೂ ಒಪ್ಪೋದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಬಿಜೆಪಿ ಪಕ್ಷದಲ್ಲಿ ಇನ್ನೂ ಜೂನಿಯರ್, ಅವನಿಗೆ ಏನೂ ಐಡಿಯಾಲಜಿ ಇಲ್ಲ. ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ. ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ. ಹಾಗಂತ ನಾನೆಂದೂ ಯಡಿಯೂರಪ್ಪನವರಿಗೆ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ, ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಏಕವಚನದಲ್ಲೇ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದಾರೆ.

ಆರ್​ಎಸ್ಎಸ್ ಪ್ರಮುಖ ನಾಯಕರು, ಬಿಜೆಪಿ ನಾಯಕರ ಸಭೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಸಭೆಯಲ್ಲಿ ಏನು ಚರ್ಚೆಯಾಯಿತು ಎಂದು ಹೇಳುವುದಕ್ಕೆ ಆಗುವುದಿಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ ಅಷ್ಟೇ. 15ರಿಂದ 20 ಜನರ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಸಲಿ ಎಂದು ಬಿಜೆಪಿ, ಆರ್​ಎಸ್​ಎಸ್​ ಪ್ರಮುಖರ ಸಭೆಯಲ್ಲಿ ಮನವಿ ಮಾಡಿದ್ದೇವೆ. ವರಿಷ್ಠರು ನೀವು ಇಂತಿಂಥ ಕೆಲಸ ಮಾಡುವಂತೆ ಟಾಸ್ಕ್ ನೀಡಿದ್ದಾರೆ. 120ರಿಂದ 130 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಶಕ್ತಿ ನಮ್ಮಲ್ಲಿದೆ. ವರಿಷ್ಠರು ನೀಡಿದ ಟಾಸ್ಕ್​ನಲ್ಲಿ ನಾನು ವಿಫಲನಾದರೆ ನನ್ನನ್ನು ಒದ್ದು ಹೊರಹಾಕಿ ಎಂದು ಸಂಘ ಪರಿವಾರದ ಪ್ರಮುಖರ ಸಭೆಯಲ್ಲಿ ಹೇಳಿದ್ದೇನೆ ಎಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಅನಂತ್ ಕುಮಾರ್ ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರೂ ಪ್ರಬಲ ನಾಯಕನಾಗಿಲ್ಲ. ಬಿಜೆಪಿ ಎಂಬುದು ಒಬ್ಬರ ಕೈಯಲ್ಲಿ ಆಡಳಿತ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ. ಒಬ್ಬರ ಕೈಗೆ ಪಕ್ಷ ಸಿಕ್ಕರೆ ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ. ಆ ಚೇರ್ ಮೇಲೆ ಕೂತರೆ ಸರ್ವಾಧಿಕಾರ ಧೋರಣೆ ಬರುತ್ತದೆ. 15

ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಲೀಡರ್ ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಯಡಿಯೂರಪ್ಪನವರ ಬಗ್ಗೆ ನಮಗೆ ಬಹಳ ಗೌರವವಿದೆ. ಯಡಿಯೂರಪ್ಪಗೆ ವಯಸ್ಸಾಗಿದೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ನಮಗೆ ಯಡಿಯೂರಪ್ಪನವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಆಕ್ರೋಶ:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಭಯೋತ್ಪಾದನೆ, ಗಲಭೆ ಇಂತಹ ಹಲವು ವಿಚಾರಗಳು ಹೆಚ್ಚುತ್ತಿವೆ. ಲೋಕಸಭಾ ಚುನಾವಣೆಯಲ್ಲಿ 40 ಸೀಟುಗಳು ಕಡಿಮೆ ಬಂದಿರುವುದಕ್ಕೆ ಈ ರೀತಿ ನಡೆಯುತ್ತಿದೆ. ರಾಹುಲ್ ಗಾಂಧಿ ವಿದೇಶದಲ್ಲಿ ಕುಳಿತು ದೇಶದ ಮಾನ ಕಳೆಯುತ್ತಿದ್ದಾರೆ. ಅಲ್ಲಿ ಮೀಸಲಾತಿ ತೆಗೆಯಲಾಗುವುದು ಎಂದು ಹೇಳಿದರು. ಆದರೆ, ನಮ್ಮ ದೇಶದಲ್ಲಿ ಸಂವಿಧಾನದ ಬುಕ್ ಹಿಡಿದುಕೊಂಡು ತಿರುಗಾಡುತ್ತಾರೆ. ಅಂಬೇಡ್ಕರ್ ಕಂಡಂತಹ ದೇಶಕ್ಕೆ ಸ್ವಾತಂತ್ರ ಇನ್ನೂ ಸಿಕ್ಕಿಲ್ಲ. 40 ಸೀಟ್ ಕಡಿಮೆ ಬಂದಿರುವುದಕ್ಕೆ ದೇಶದಲ್ಲಿ ಇಷ್ಟು ಹಾರಾಡುತ್ತಾರೆ. ಮೋದಿ ಅವರ ಕೈ ಬಲ ಪಡಿಸಬೇಕು ಆಗ ಮಾತ್ರ ಹಿಂದೂ ಧರ್ಮ ಉಳಿಯುತ್ತದೆ ಎಂದು ಅಥಣಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

Leave a Comment