ಬೆಂಗಳೂರು: ವಿಧಾನ ಪರಿಷತ್ನಲ್ಲಿ ಗುರುವಾರ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಆಡಳಿತಾರೂಢ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಮಂಡನೆಗೆ ಪೂರ್ವಭಾವಿಯಾಗಿ ನಿನ್ನೆ ನಗರದ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯಲ್ಲಿ ವಿಧಾನ ಪರಿಷತ್ನ ಬಿಜೆಪಿ ಸದಸ್ಯರ ಸಭೆ ನಡೆಯಿತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವಕೃಪಾದಲ್ಲಿ ವಿಧೇಯಕ ಮಂಡನೆ ವೇಳೆ ಪ್ರಬಲವಾಗಿ ಸಮರ್ಥಿಸಿಕೊಳ್ಳುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ವಿಧಾನ ಪರಿಷತ್ ಬಿಜೆಪಿ ಸದಸ್ಯರಿಗೆ ಈ ಸಂಬಂಧ ಆರ್ಎಸ್ಎಸ್ ನಿರ್ದೇಶನ ನೀಡಿದೆ. ವಿಧಾನ ಪರಿಷತ್ನಲ್ಲಿ ಇಂದು ಪ್ರಶೋತ್ತರ ಕಲಾಪ ನಂತರ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕವನ್ನು ಮಂಡಿಸಲಿದ್ದಾರೆ.
ಆರ್ಎಸ್ಎಸ್ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ನ ಸರ್ಕಾರಿ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ತುಳಸಿ ಮುನಿರಾಜುಗೌಡ, ಕೆ.ಎಸ್.ನವೀನ್, ಪ್ರತಾಪಸಿಂಹ ನಾಯಕ, ಎಂ.ಕೆ.ಪ್ರಾಣೇಶ್ ಉಪಸ್ಥಿತರಿದ್ದರು.
ಮತಾಂತರ ನಿಷೇಧ ವಿಧೇಯಕಕ್ಕೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ವಿಧಾನ ಪರಿಷತ್ನಲ್ಲಿ ಈವರೆಗೆ ಮಸೂದೆಯನ್ನು ಸರ್ಕಾರ ಮಂಡಿಸಿಲ್ಲ. ಮಸೂದೆ ಮಂಡಿಸುವ ತಡವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಪ್ರಸ್ತುತ ವಿಧಾನ ಪರಿಷತ್ನಲ್ಲಿ ಬಿಜೆಪಿಯ 41 ಸದಸ್ಯರಿದ್ದಾರೆ. ಕಾಂಗ್ರೆಸ್ನ 26 ಮತ್ತು ಜೆಡಿಎಸ್ನ 8 ಸದಸ್ಯರಿದ್ದಾರೆ. ಸಂಖ್ಯಾಬಲದಲ್ಲಿ ಮೇಲುಗೈ ಸಾಧಿಸಿರುವುದರಿಂದ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವ ಉತ್ಸಾಹ ಬಿಜೆಪಿಗೆ ಬಂದಿದೆ.
ಮತಾಂತರ ನಿಷೇಧ ಕಾಯ್ದೆಯ ಮುಖ್ಯಾಂಶಗಳು :
1) ಮತಾಂತರ ಅಗಬಯಸುವ
ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.
2) ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡತಕ್ಕದ್ದು.
3) ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡತಕ್ಕದ್ದು.
4) ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡತಕ್ಕದ್ದು.
5) ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು.
6) ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸತಕ್ಕದ್ದು.
7) ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡತಕ್ಕದ್ದು.
8) ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡತಕ್ಕದ್ದು.
9) ಮ್ಯಾಜಿಸ್ಟ್ರೇಟ್ರಿಂದ ಮಾಹಿತಿ ಸ್ವಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮ ವಹಿಸುವುದು.














