ಬೆಂಗಳೂರು : ರಾಜ್ಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲಿ 'ಕರ್ನಾಟಕ ಮಾದರಿ' ಮಾಡುತ್ತೇವೆ. ಆದರೆ, ಕರ್ನಾಟಕವು ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ತೆರಿಗೆ ಪಾವತಿಸಿದರೆ, ನಮಗೆ ಕೇವಲ 50 ಸಾವಿರ ಕೋಟಿ ರೂ. ಅನುದಾನ ಕೊಡುತ್ತಿದೆ. ಈ ತಾರತಮಯ್ಯದಿಂದಾಗಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದ ಅವರು, ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಸುಮಾರು 4 ಲಕ್ಷ ಕೋಟಿಗೂ ಹೆಚ್ಚಿನ ತೆರಿಗೆ, ಸುಂಕ, ಮೇಲ್ತೆರಿಗೆಗಳನ್ನು ಕೇಂದ್ರಕ್ಕೆ ಪಾವತಿಸುತ್ತಿದೆ. ಆದರೆ, ನಮಗೆ ವಾಪಸ್ಸು ಬರುತ್ತಿರುವುದು 50 ಸಾವಿರ
ಕೋಟಿ ರೂ. ಮಾತ್ರ. ನಮಗೆ ನ್ಯಾಯಯುತವಾಗಿ ಬರಬೇಕಾದಷ್ಟು ಸಂಪನ್ಮೂಲಗಳು ಕೇಂದ್ರದಿಂದ ಮರಳಿ ಬಂದರೆ ರಾಜ್ಯವು ಅತ್ಯಂತ ಶ್ರೀಮಂತ ರಾಜ್ಯವಾಗುವುದು. ಇಷ್ಟರ ನಡುವೆಯೂ ನಾವು ಆರ್ಥಿಕ ಶಿಸ್ತನ್ನು ಸರಿಯಾಗಿ ಪಾಲಿಸುತ್ತಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ನೈಜ ದೇಶಪ್ರೇಮಿಗಳಿಗೆ ಇದು ಅರ್ಥವಾಗುತ್ತದೆ ಎಂದು ತಿಳಿಸಿದರು.















