ಹಾವೇರಿ: ಆರು ಯುವಕರಿಂದ ಮುಸ್ಲಿಂ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ಜನವರಿ 8ರಂದು ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನೈತಿಕ ಪೊಲೀಸ್‌ಗಿರಿಯ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಲಾಡ್ಜ್‌ನಿಂದ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನಿಬ್ಬರನ್ನು ಬಂಧಿಸಿದ್ದಾರೆ.
ಇಂದು ಬಂಧನಕ್ಕೆ ಒಳಗಾದ ಅತ್ಯಾಚಾರಿಗಳನ್ನು ಸಾದಿಕ್ ಬಾಬುಸಾಬ್ ಅಗಸಿಮನಿ (29 ವರ್ಷ), ನಿಯಾಜ್ ಅಹ್ಮದ್ ಎಂಬವರ ಪುತ್ರ ಶೋಯೆಬ್ (19) ಎಂದು ಗುರುತಿಸಲಾಗಿದೆ. ಇದರಲ್ಲಿ ಸಾದಿಕ್ ಸಂತೆ ವ್ಯಾಪಾರ ಮಾಡುತ್ತಿದ್ದರೆ, 19 ವರ್ಷ ಶೋಯೆಬ್ ಹೊಟೇಲ್ ಕೆಲಸ ಮಾಡುತ್ತಿದ್ದಾನೆ. ಈ ಪ್ರಕರಣದಲ್ಲಿ ಈ ಹಿಂದೆ ಮೂವರನ್ನು ಬಂಧಿಸಲಾಗಿತ್ತು. ಅಪ್ತಾಬ್ ಚಂದನಕಟ್ಟಿ , ಮದರಸಾಬ್ ಮಂಡಕ್ಕಿ, ಅಬ್ದುಲ್ ಖಾದರ್ ಎಂಬವರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಈ ನಡುವೆ ಆರೋಪಿ ಮೊಹಮ್ಮದ್ ಸೈಫ್ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜನವರಿ 8ರಂದು ಮುಸ್ಲಿಂ ಮಹಿಳೆ ಮತ್ತು ಕೆಎಸ್‌ಆರ್ಟಿಸಿ ಬಸ್ ಚಾಲಕನಾಗಿರುವ ಹಿಂದು ವ್ಯಕ್ತಿಯೊಬ್ಬರ ಹಾನಗಲ್‌ನ ಲಾಡ್ಜ್ ಒಂದಕ್ಕೆ ಹೋಗಿದ್ದರು. ಅವರಿಬ್ಬರು ಕೆಲವು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಒಬ್ಬ ಮುಸ್ಲಿಂ ಮಹಿಳೆ, ಹಿಂದು ಯುವಕ ಲಾಡ್ಜ್‌ಗೆ ಹೋಗಿದ್ದನ್ನು ಗಮನಿಸಿದ್ದ ಆಟೋ ಚಾಲಕನೊಬ್ಬ ಅಲ್ಲಿನ ಮುಸ್ಲಿಂ ಪುಂಡ ಯುವಕರಿಗೆ ವಿಷಯವನ್ನು ತಲುಪಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಮುಸ್ಲಿಂ ಯುವಕರ ಗುಂಪೊಂದು ಲಾಡ್ಜ್‌ಗೆ ಹೋಗಿ, ಟ್ಯಾಪ್ ರಿಪೇರಿ ಹೆಸರಿನಲ್ಲಿ ಅವರಿಬ್ಬರು ಇದ್ದ ಕೋಣೆಯನ್ನು ಪ್ರವೇಶಿಸಿತ್ತು. ಅಲ್ಲಿ ಹಿಂದು ಪುರುಷ ಮತ್ತು ಮುಸ್ಲಿಂ ಮಹಿಳೆಯನ್ನು ಚೆನ್ನಾಗಿ ಥಳಿಸಿದ ತಂಡ ಇಬ್ಬರನ್ನೂ ಲಾಡ್ಜ್‌ನಿಂದ ಹೊರಗೆ ಎಳೆದುಕೊಂಡು ಬಂದಿದೆ. ಯುವಕನಿಗೆ ಚೆನ್ನಾಗಿ ಥಳಿಸಿ ಒಂದಷ್ಟು ದೂರಕ್ಕೆ ಬೈಕ್‌ನಲ್ಲಿ ಬಿಟ್ಟು ಬಂದ ದುಷ್ಟರು ಮಹಿಳೆಯರನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿದೆ.
ಆಕೆಯನ್ನು ಮೊದಲು ಒಂದು ನದಿ ತೀರಕ್ಕೆ, ಬಳಿಕ ಕಾಡಿಗೆ ಕರೆದುಕೊಂಡು ಹೋದ ಈ ದುಷ್ಟರು,
ನಿನಗೆ ಹಿಂದು ಯುವಕ ಬೇಕಾ? ನಾವು ಆಗುವುದಿಲ್ವಾ? ಎಂದು ಕೇಳುತ್ತಲೇ ಸರದಿ ಪ್ರಕಾರ ಅತ್ಯಾಚಾರ ನಡೆಸಿದ್ದರು. ಏಳು ಮಂದಿಯ ದಾಳಿಗೆ ಒಳಗಾದ ಯುವತಿ ನಿತ್ರಾಣಳಾದರೂ ಬಿಡದ ಕಿರಾತಕರು ತಾವು ಮಾಡುವ ದುಷ್ಕೃತ್ಯವನ್ನು ವಿಡಿಯೊ ಮಾಡಿಕೊಳ್ಳುವಷ್ಟು ದಾರ್ಷ್ಟ್ಯ ಮೆರೆದಿದ್ದರು.
ಎಲ್ಲರೂ ಸಾಮೂಹಿಕ ಅತ್ಯಾಚಾರ ಮಾಡಿದ ಬಳಿಕ ಕೊನೆಗೆ ಆಕೆಗೆ 500 ರೂ. ಕೊಟ್ಟು ನಿನ್ನ ಊರಿಗೆ ಹೋಗು ಎಂದು ಹೇಳಿದ್ದಾರೆ. ಆಕೆ ಬಳಿಕ ವಾಹನ ಹತ್ತಿ ತನ್ನ ಗಂಡನಿರುವ ಶಿರಸಿಗೆ ಹೋಗಿ ವಿಷಯ ತಿಳಿಸಿದ್ದಾಳೆ.
ಆರಂಭದಲ್ಲಿ ಇದೊಂದು ನೈತಿಕ ಪೊಲೀಸ್ ಗಿರಿ ಪ್ರಕರಣವಾಗಿ ಗಮನ ಸೆಳೆದಿತ್ತು. ಆದರೆ, ಬಳಿಕ ಅದು ಗ್ಯಾಂಗ್ ರೇಪ್ ಆಗಿ ಎಲ್ಲ ಕಡೆ ಗಮನ ಸೆಳೆಯಿತು. ಪೊಲೀಸರು ಆರಂಭದಲ್ಲಿ ನಾಲ್ವರು ಮತ್ತು ಬಳಿಕ ಇಬ್ಬರನ್ನು ಬಂಧಿಸಿದ್ದಾರೆ.
ಪ್ರಕರಣವನ್ನು ಮುಚ್ಚಿ ಹಾಕಲು ಯತ್ನ ನಡೆಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.ಹಾವೇರಿಯ ನೈತಿಕ ಪೊಲೀಸ್‌ಗಿರಿ ಪ್ರಕರಣವನ್ನು ಸಂತ್ರಸ್ತರಿಗೆ ಹಣ ನೀಡುವ ಮೂಲಕ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಆರೋಪಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ ಪ್ರಕರಣವನ್ನು ಅಲ್ಲಿನ ಪೊಲೀಸರು ಸಂತ್ರಸ್ತರಿಗೆ ದುಡ್ಡು ಕೊಟ್ಟು ಆಮಿಷವೊಡ್ಡಿ ಮುಚ್ಚಿ ಹಾಕಲು ಯತ್ನಿಸಿದ್ದರು. ತನಿಖೆಗೆ ಎಸ್.ಐ.ಟಿ ರಚನೆ ಮಾಡಿ. ಸಿಎಂ ಸಿದ್ದರಾಮಯ್ಯ ಸೋಮವಾರ ಹಾವೇರಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿಯಾದರೂ ಎಸ್ಐಟಿ ತನಿಖೆಗೆ ಘೋಷಿಸುತ್ತಾರೆ ಅಂತ ನಿರೀಕ್ಷೆ ಮಾಡುತ್ತೇನೆ ಎಂದರು.
ಬಿಜೆಪಿ ಮಹಿಳಾ ನಿಯೋಗ ಹಾವೇರಿಗೆ ಭೇಟಿ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ದೊರೆತ ನಂತರ ತನಿಖೆಯ ನೆಪದಲ್ಲಿ ಸಂತ್ರಸ್ತೆಯನ್ನು ಶಿರಸಿಗೆ ಕರೆದೊಯ್ಯಲಾಗಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಪಕ್ಷವು ಈ ರೀತಿಯ ರಾಜಕೀಯ ಮಾಡುತ್ತಿದೆ ಮತ್ತು ಅವರಿಂದ ಇನ್ನೇನು ನಿರೀಕ್ಷಿಸಬಹುದು?" ಎಂದು ಪ್ರಶ್ನಿಸಿದರು.















