ಬೆಂಗಳೂರು: ರಾಜ್ಯದಲ್ಲಿ ಟೊಮೆಟೋ ಜ್ವರದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಕೊರೋನಾ ಸೋಂಕಿಗೂ, ಟೊಮೆಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ, ಹಾಗಾಗಿ ಗಾಬರಿಯಾಗುವುದು ಬೇಡ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,
5ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಜ್ವರ ಹಾಗೂ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಕೇರಳದ ಆರೋಗ್ಯ ಇಲಾಖೆ ಇದಕ್ಕೆ ಚಿಕಿತ್ಸೆಗಳನ್ನು ನೀಡುತ್ತಿದೆ. ಕೇರಳ ಆರೋಗ್ಯ ಇಲಾಖೆಯ ಜೊತೆ ರಾಜ್ಯದ ಆರೋಗ್ಯ ಇಲಾಖೆ ಸಂಪರ್ಕದಲ್ಲಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು, ವಿಶೇಷವಾಗಿ ಮಕ್ಕಳ ಬಗ್ಗೆ ನಿಗಾ
ಇಡಲು ಈಗಾಗಲೇ ಗಡಿ ಭಾಗದ ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಗಡಿ ಭಾಗದ ಐದಾರು ಜಿಲ್ಲೆಗಳಲ್ಲಿರುವ ಮಕ್ಕಳ ಮೇಲೂ ನಿಗಾ ಇಡಲಾಗಿದೆ. ಮಕ್ಕಳಿಗೆ ಜ್ವರ ಅಥವಾ ಚರ್ಮದ ಮೇಲೆ ಗುಳ್ಳೆಗಳು ಕಂಡು ಬಂದರೆ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.














