ಬೆಂಗಳೂರು: ಶತಮಾನಗಳ ಇತಿಹಾಸ ಇರುವ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ವಿದ್ಯುಕ್ತ ಚಾಲನೆ ದೊರಕಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಕಡಲೆ ಕಾಯಿ ಪರಿಷೆಗೆ ಸುಮಾರು ಆರೇಳು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ.
ಬುಲ್ ಟೆಂಪಲ್ ರಸ್ತೆಯ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಬಸವನಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡರು.
ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಷೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪ್ಲಾಸ್ಟಿಕ್ ತ್ಯಜಿಸಿ, ಕೈಚೀಲ ತನ್ನಿ ಎಂದು ಮನವಿ ಮಾಡಿಕೊಂಡರು. ಬಸವನಗುಡಿಯಲ್ಲಿ ಎತ್ತ ನೋಡಿದರೂ ಕಡಲೆಕಾಯಿ ರಾಶಿ ರಾಶಿ ಮತ್ತು ಜನವೋ ಜನ. ಕಾರ್ತಿಕ ಮಾಸದ ಕೊನೆ ಸೋಮವಾರ ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಬಸವನಿಗೆ ಕಡಲೆಕಾಯಿ ಹಾಗೂ ಹೂಗಳಿಂದ ಅಭಿಷೇಕ ಮಾಡಲಾಗುತ್ತದೆ. ರಜೆ ಇದ್ದ ಕಾರಣ ಕಡಲೆಕಾಯಿ ಪರಿಷೆಗೆ ಶನಿವಾರದಿಂದಲೇ ಕಳೆಗಟ್ಟಿತ್ತು.
ದೊಡ್ಡಬಳ್ಳಾಪುರ, ಕನಕಪುರ, ರಾಮನಗರ, ಮಾಗಡಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳು ಆಗಮಿಸುತ್ತಾರೆ. ಕೋಲಾರ,
ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳಿಂದಲೂ ವ್ಯಾಪಾರಿಗಳು ಕಡಲೆಕಾಯಿಯನ್ನು ಮಾರಾಟ ಮಾಡಲು ಸಜ್ಜಾಗಿದ್ದಾರೆ. ಮಳೆ ಕೊರತೆ ಕಾರಣ ಇಳುವರಿ ಕಡಿಮೆಯಾಗಿದ್ದು ಕಡಲೆಕಾಯಿ ಬೆಲೆ ಕೆಜಿಗೆ 120 ರೂ. ಗಡಿ ದಾಟಿದೆ. ಆದರೂ ಮಾರಾಟದ ಭರಾಟೆ ಜೋರಾಗಿದೆ.
ಇತಿಹಾಸ
ಬಸವನಗುಡಿಯ ಅಕ್ಕಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ (ಶೇಂಗಾ) ಬೆಳೆಯುತ್ತಿದ್ದರು. ಆದರೆ ಫಸಲಿಗೆ ಬಂದ ಎಲ್ಲ ಬೆಳೆಯನ್ನು ಎತ್ತೊಂದು ಆಗಮಿಸಿ ನಾಶಪಡಿಸುತ್ತಿತ್ತು. ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವನನ್ನು ಪ್ರಾರ್ಥಿಸಲು ಆರಂಭಿಸಿದರು. ಇದೇ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿದ್ದು, ಪೂಜಿಸಲು ಆರಂಭಿಸಿದರು. ಕೆಂಪೇಗೌಡರು ನಂದಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಅಂದಿನಿಂದ ಈ ಪ್ರದೇಶವನ್ನು ಬಸವನ ಗುಡಿ ಎಂದು ಕರೆಯಲಾಗುತ್ತಿದೆ.














