ಕಾಲ್ತುಳಿತ ಪ್ರಕರಣ: ಸರ್ಕಾರಕ್ಕೆ ಹೈಕೋರ್ಟ್​ನಿಂದ 9 ಪ್ರಶ್ನೆ; ಉತ್ತರಿಸಲು ಜೂನ್ 10ರ ಗಡುವು

Coastal Bulletin
ಕಾಲ್ತುಳಿತ ಪ್ರಕರಣ: ಸರ್ಕಾರಕ್ಕೆ ಹೈಕೋರ್ಟ್​ನಿಂದ 9 ಪ್ರಶ್ನೆ; ಉತ್ತರಿಸಲು ಜೂನ್ 10ರ ಗಡುವು

ಬೆಂಗಳೂರು: ರಾಯಲ್​​ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ವಿಜಯೋತ್ಸವದ ವೇಳೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 9 ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಸರ್ಕಾರದಿಂದ ಉತ್ತರ ಬಯಸಿದೆ.

ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾಖಲಿಸಲು ರಿಜಿಸ್ಟ್ರಿಗೆ ಆದೇಶಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್​ ನೇತೃತ್ವದ ವಿಭಾಗೀಯ ನ್ಯಾಯಪೀಠ, ಇಡೀ ಘಟನೆ ಸಂಬಂಧ ರಾಜ್ಯ ಸರ್ಕಾರಕ್ಕೆ 9 ಪ್ರಶ್ನೆಗಳನ್ನು ಕೇಳಿದೆ. ಆ ಪ್ರಶ್ನೆಗಳಿಗೆ ಉತ್ತರಿಸಿ ಜೂನ್​​ 10ರಂದು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಒಂಬತ್ತು ಪ್ರಶ್ನೆಗಳೇನು?:

ವಿಜಯೋತ್ಸವವನ್ನು ಯಾವಾಗ ಮತ್ತು ಯಾರು, ಯಾವ ರೀತಿಯಲ್ಲಿ ನಡೆಸಲು ನಿರ್ಧರಿಸಿದರು?

ಸಂಚಾರ ನಿಯಂತ್ರಣಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಗಿತ್ತು?

ಸಾರ್ವಜನಿಕರು, ಜನಸಂದಣಿ ನಿಯಂತ್ರಿಸಲು ಯಾವ ಕ್ರಮ ತೆಗೆದುಕೊಳ್ಳಲಾಗಿತ್ತು?

ಸ್ಥಳದಲ್ಲಿ ಯಾವ ವೈದ್ಯಕೀಯ ಮತ್ತು ಇತರ

ಸೌಲಭ್ಯ ವ್ಯವಸ್ಥೆ ಮಾಡಲಾಗಿತ್ತು?

ಆಚರಣೆಗಳ ಸಮಯದಲ್ಲಿ ಎಷ್ಟು ಜನರು ಪಾಲ್ಗೊಳ್ಳಬಹುದು ಎಂಬ ಬಗ್ಗೆ ಮುಂಚಿತವಾಗಿ ಯಾವುದೇ ಮೌಲ್ಯಮಾಪನ ಮಾಡಲಾಗಿತ್ತೆ?

ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಸ್ಥಳದಲ್ಲಿ ವೈದ್ಯಕೀಯ ತಜ್ಞರು ತಕ್ಷಣವೇ ಚಿಕಿತ್ಸೆ ನೀಡಿದ್ದಾರೆಯೇ? ಇಲ್ಲದಿದ್ದರೆ ಏಕೆ?

ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಎಷ್ಟು ಸಮಯ ಹಿಡಿಯಿತು?

ಯಾವುದೇ ಕ್ರೀಡಾಕೂಟ ಮತ್ತು ಈ ರೀತಿಯ ಆಚರಣೆಗಳಲ್ಲಿ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಜನಸಂದಣಿಯನ್ನು ನಿರ್ವಹಿಸಲು ಯಾವುದೇ ಎಸ್ಒಪಿ ರೂಪಿಸಲಾಗಿದೆಯೇ?

ಕಾರ್ಯಕ್ರಮ ಆಯೋಜಿಸಲು ಯಾವುದೇ ಅನುಮತಿ ಕೋರಲಾಗಿತ್ತೇ? ಎಂಬ ಪ್ರಶ್ನೆಗೆ ಉತ್ತರ ನೀಡಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಪೀಠ ಸೂಚನೆ ನೀಡಿದೆ.

Leave a Comment