ಮಾಜಿ ಐಎಎಸ್ ಅಧಿಕಾರಿ, ಸಿನಿಮಾ ನಟ, ರಾಜಕಾರಣಿ ಕೆ ಶಿವರಾಮ್ ಅವರ ಅಂತ್ಯಸಂಸ್ಕಾರ ಅವರ ಹುಟ್ಟೂರಾದ ಊರಗವಳ್ಳಿಯಲ್ಲಿ ನೆರವೇರಿತು.
ಮಾಜಿ ಐಎಎಸ್ ಅಧಿಕಾರಿ, ನಟ ಕೆ ಶಿವರಾಮ್ (K Shivaram) ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಊರಗವಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕುಟುಂಬಸ್ಥರು, ಛಲವಾದಿ ಮಹಾಸಭಾದ ಸದಸ್ಯರು, ಸ್ವಾಮೀಜಿಗಳು, ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಶಿವರಾಮ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯ್ತು. ಶಿವರಾಮ್ ಅವರಿಗೆ ಸರ್ಕಾರಿ ಗೌರವಗಳು ದೊರೆಯಲಿಲ್ಲವೆಂಬ ಬೇಸರದ ನಡುವೆಯೇ ಅಭಿಮಾನಿಗಳು, ಕುಟುಂಬಸ್ಥರು ಶಿವರಾಮ್ ಅವರಿಗೆ ಅಂತಿಮ ವಿದಾಯ ಹೇಳಿದರು.
ಶಿವರಾಮ್ ಅವರು ಫೆಬ್ರವರಿ 29ರಂದು ನಿಧನ ಹೊಂದಿದ್ದರು, ಇಂದು (ಮಾರ್ಚ್ 1) ರ ಮುಂಜಾನೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರುಗಳು, ಶಾಸಕರು, ಬಿಜೆಪಿ ಮುಖಂಡರುಗಳು ಆಗಮಿಸಿ ಶಿವರಾಮ್ ಅವರ ಅಂತಿಮ ದರ್ಶನ ಪಡೆದರು. ಚಿತ್ರರಂಗದ ಹಲವು ಗಣ್ಯರು ಸಹ ಆಗಮಿಸಿ ಅಂತಿಮ ದರ್ಶನ ಪಡೆದರು.
ಶಿವರಾಮ್ ಅವರ ಅಂತ್ಯಸಂಸ್ಕಾರಕ್ಕೆ ಸರ್ಕಾರ ಜಾಗ ನೀಡುತ್ತದೆ, ಅವರಿಗೆ ಸರ್ಕಾರಿ ಗೌರವಗಳು ನೀಡಲಾಗುತ್ತದೆ ಎಂಬ ಭರವಸೆ
ದೊರಕಿತ್ತು, ಕುಟುಂಬಸ್ಥರು, ಅಭಿಮಾನಿಗಳು ಸಹ ಸರ್ಕಾರದ ಮಾತನ್ನು ನಂಬಿ ಬೆಳಿಗಿನಿಂದ ಕಾದಿದ್ದೇ ಬಂತು ಆದರೆ ಸರ್ಕಾರದಿಂದ ಗೌರವ ಲಭಿಸಲಿಲ್ಲ. ಛಲವಾದಿ ಮಹಾಸಭಾದ ಜಾಗದಲ್ಲಿಯೇ ಅವರ ಅಂತ್ಯಸಂಸ್ಕಾರ ಮಾಡಲು ಸಹ ಸಂಘದ ಸದಸ್ಯರು ತೀರ್ಮಾನಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಅದನ್ನೂ ಸಹ ಬದಲಾವಣೆ ಮಾಡಲಾಯ್ತು. ಅಂತಿಮವಾಗಿ ಶಿವರಾಮ್ ಅವರ ಹುಟ್ಟೂರಾದ ಊರಗವಳ್ಳಿಯಲ್ಲಿಯೇ ಶಿವರಾಮ್ ಅವರ ಅಂತ್ಯ ಸಂಸ್ಕಾರ ನೆರವೇರಿತು.
ಕೆ.ಶಿವರಾಂ ಕೇವಲ ನಟ, ಐಎಎಸ್ ಅಧಿಕಾರಿ, ರಾಜಕಾರಣಿಯಾಗಿರಲಿಲ್ಲ.ಇವೆಲ್ಲದಕ್ಕೂ ಮೀರಿದ ವ್ಯಕ್ತಿಯಾಗಿದ್ದರು. ಛಲವಾದಿ ಜನಾಂಗದ ಶಕ್ತಿಯೂ ಆಗಿದ್ದರು. ಛಲವಾದಿ ಹೋರಾಟದ ಮುಂಚೂಣಿಯಲ್ಲಿದ್ದರು. ಹೀಗಾಗಿಯೇ ಅಂತ್ಯಕ್ರಿಯೆ ಛಲವಾದಿ ಮಹಾಸಭಾ ಆವರಣದಲ್ಲೇ ನಡೆಯಬೇಕು ಮತ್ತು ಸರ್ಕಾರ ಜಾಗ ನೀಡಿ ಅಂತಿಮ ವಿಧಿವಿಧಾನ ಪೂರೈಸಲು ಅವಕಾಶ ಮಾಡಿಕೊಡಬೇಕೆಂದು ಬೆಳ್ಳಿಗ್ಗೆಯಿಂದನೇ ನಟ ದುನಿಯಾ ವಿಜಯ್ ಸಹಿತ ಮನವಿಯನ್ನು ಮಾಡಲಾಗಿತ್ತು.
ರಾಜಕೀಯವನ್ನ ಪಕ್ಕಕ್ಕೆ ಇಟ್ಟು ಸರ್ಕಾರ ಕೊನೆ ಪಕ್ಷ ಪ್ರತಿಕ್ರಿಯೆಯನ್ನಾದರೂ ನೀಡಬಹುದಿತ್ತು. ಸಮಜಾಯಿಷಿ, ಸಬೂಬು ನೀಡುವ ಪ್ರಯತ್ನವನ್ನಾದರೂ ಮಾಡಬಹುದಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.









