ಮೂಡಿಗೆರೆ :ದಲಿತ ಯುವಕನಿಗೆ ಮೂತ್ರ ಕುಡಿಸಿದ ಅಮಾನವೀಯ ಪ್ರಕರಣಕ್ಕೆ ಸಂಬಂದಿಸಿದಂತೆ ಗೋಣಿಬೀಡು ಪಿ ಎಸ್ ಐ ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ತನ್ನ ಗ್ರಾಮದ ಮಹಿಳೆ ಕಾಣೆಯಾಗಿದ್ದ ಪ್ರಕರಣದಲ್ಲಿ ನನ್ನನ್ನು ವಿನಾಕಾರಣ ಠಾಣೆಗೆ ಕರೆದೊಯ್ದು ಬೆಳಗ್ಗಿನಿಂದ ರಾತ್ರಿವರೆಗೂ ಕ್ರೂರವಾಗಿ ದೌರ್ಜನ್ಯ ನಡೆಸಿ, ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಲಾಗಿದೆ. ಅಮಾನವೀಯವಾಗಿ ನಡೆದುಕೊಂಡ ಪಿಎಸ್‌ಐ ಅರ್ಜುನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೇ 10 ರಂದು ರಾಜ್ಯ ಪೋಲೀಸ್ ಮಹಾ ನಿರ್ದೇಶಕರು, ಪಶ್ಚಿಮ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ಸಂತ್ರಸ್ತ ಯುವಕ ಪುನೀತ್ ದೂರು ನೀಡಿದ್ದರು.
ಗೋಣಿಬೀಡು ಪೊಲಿಸ್ ಇನ್ಸ್ಪೆಕ್ಟರ್ ಅರ್ಜುನ್ ವಿರುದ್ಧ ಐಪಿಸಿ ಸೆಕ್ಷನ್ 342/323/504/506/330/348 ಹಾಗೂ ಪರಿಶಿಷ್ಟ
ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಕೇಸು ದಾಖಲಾಗಿತ್ತು.ಬಳಿಕ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು. ವಿವಿಧ ಪ್ರಕರಣಗಳಲ್ಲಿ ಶಂಕಿತರನ್ನು ವಿಚಾರಣೆ ನೆಪದಲ್ಲಿ ಕರೆಸಿ ವಿಕೃತವಾಗಿ ನಡೆದುಕೊಂಡಿರುವ ಅರ್ಜುನ್ ವಿಕೃತ ಘಟನೆಗಳ ವಿವರ ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಅರ್ಜುನ್ ನನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶಿಸಿತ್ತು.
ಬಂದನದ ಸುಳಿವು ಅರಿತ ಪಿಎಸ್‌ಐ ಅರ್ಜುನ್ ಜಾಮೀನು ಕೋರಿ ನ್ಯಾಯಾಲಯ ಮತ್ತು ಹೈಕೋರ್ಟ್ ಏಕ ಸದಸ್ಯದಲ್ಲಿ ಅರ್ಜಿ ಸಲ್ಲಿಸಿದ್ದರು.ಜಾಮೀನು ತಿರಸ್ಕೃತಗೊಂಡ ಬಳಿಕ ಅರ್ಜುನ್ ತಲೆ ಮರೆಸಿಕೊಂಡಿದ್ದರು.ನಿನ್ನೆ ರಾತ್ರಿ ಸಿಐಡಿ ಪೊಲೀಸರು ಆರೋಪಿ ಅರ್ಜುನ್‌ನನ್ನು ಬಂಧಿಸಿದ್ದಾರೆ
.















