Coastal Bulletin

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವುಮೆನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಬಲಿಷ್ಠ ತಂಡವಾಗಿ ಗುರುತಿಸಿಕೊಂಡ ಉಭಯ ತಂಡದ ಹೋರಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಡೆಲ್ಲಿ ತಂಡವನ್ನು 131 ರನ್‌ಗೆ ಕಟ್ಟಿಹಾಕಿದ ಮುಂಬೈ ಇಂಡಿಯನ್ಸ್ ದಿಟ್ಟ ಹೋರಾಟದ ಮೂಲಕ ಗುರಿ ಚೇಸ್ ಮಾಡಿತು. 19.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಚೊಚ್ಚಲ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಟ್ರೋಫಿ ಗೆದ್ದುಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಡೆಲ್ಲಿ ತಂಡಕ್ಕೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 131 ರನ್  ಸಿಡಿಸಿ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿತು.  132 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಯಾಸ್ತಿಕಾ ಭಾಟಿಯಾ ಕೇವಲ 4 ರನ್ ಸಿಡಿಸಿ ಔಟಾದರು. ಇತ್ತ ಹೈಲಿ ಮ್ಯಾಥ್ಯೂಸ್ 13 ರನ್ ಸಿಡಿಸಿ ಔಟಾದರು. ಕುಸಿದ ತಂಡಕ್ಕೆ ನ್ಯಾಟ್ ಸ್ಕಿವಿಯರ್ ಬ್ರಂಟ್ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಜೊತೆಯಾಟದಿಂದ ಮತ್ತೆ ಗೆಲುವಿನ ಹಾದಿಯಲ್ಲಿ ಸಾಗತೊಡಗಿತು.  ಒಂದೆಡೆ ಮುಂಬೈ ಹೋರಾಟ ನೀಡಿದರೆ, ಇತ್ತ ಡೆಲ್ಲಿ

ಕ್ಯಾಪಿಟಲ್ಸ್ ಅಷ್ಟೇ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿತು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ರನ್ ಗಳಿಸುವುದು ಸುಲಭವಾಗಲಿಲ್ಲ. ನಾಯಕಿ ಹರ್ಮನ್ 37 ರನ್ ಸಿಡಿಸಿ ಔಟಾದರು. ನ್ಯಾಟ್ ಸ್ಕೀವಿಯರ್ ಹಾಫ್ ಸೆಂಚುರಿ ಸಿಡಿಸಿದರೂ ಮುಂಬೈ ಇಂಡಿಯನ್ಸ್ ಆತಂಕ ಹೆಚ್ಚಾಗತೊಡಗಿತು.ಆದರೆ ಮೇಲಿ ಕೆರ್ ಸತತ ಬೌಂಡರಿ ಸಿಡಿಸುವ ಮೂಲಕ ಮುಂಬೈ ಸಂಕಷ್ಟ ದೂರ ಮಾಡಿದರು.  ಅಂತಿಮ 6 ಎಸೆತದಲ್ಲಿ ಮುಂಬೈ ಗೆಲುವಿಗೆ 5 ರನ್ ಅವಶ್ಯಕತೆ ಇತ್ತು.  ಇನ್ನೂ 3 ಎಸೆತ ಬಾಕಿ ಇರುವಂತೆ ಮುಂಬೈ ಇಂಡಿಯನ್ಸ್ 7 ವಿಕೆಟ್ ಗೆಲುವು ದಾಖಲಿಸಿತು. ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದು ಸಂಭ್ರಮ ಆಚರಿಸಿತು.

Leave a Comment