ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. 10 ಫ್ರಾಂಚೈಸಿಗಳು ಐಪಿಎಲ್ 2024 ಕ್ಕೆ ಮುಂಚಿತವಾಗಿ ತಮ್ಮ ತಂಡಗಳನ್ನು ಬಲಪಡಿಸುವ ಸಲುವಾಗಿ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಸಲಿದೆ.
10 ತಂಡಗಳಲ್ಲಿ ಒಟ್ಟು 77 ಸ್ಥಾನಗಳು ಖಾಲಿಯಿದ್ದು ಐಪಿಎಲ್ ಹರಾಜಿನಲ್ಲಿ 13 ದೇಶಗಳ ಒಟ್ಟು 333 ಆಟಗಾರರು ಕಣಕ್ಕಿಳಿಯಲಿದ್ದಾರೆ. ಇವರಲ್ಲಿ 214 ಮಂದಿ ಭಾರತೀಯರು. 10 ತಂಡಗಳು ಒಟ್ಟು 262.95 ಕೋಟಿ ರೂ. ಪರ್ಸ್ ಹೊಂದಿದ್ದು, ಹಲವು ಆಟಗಾರರು ಕೋಟಿ ಕೋಟಿ ಹಣ ಜೇಬಿಗೆ ಇಳಿಸುವ ಸಾಧ್ಯತೆ ಇದೆ.
ಗುಜರಾತ್ ಟೈಟಾನ್ಸ್ (ಜಿಟಿ) ಹೆಚ್ಚಿನ ಬಂಡವಾಳ ಹೊಂದಿದ್ದು ರೂ 38.15 ಕೋಟಿಯೊಂದಿಗೆ ಹರಾಜಿಗೆ ಹೋಗಲಿದೆ. ಉಳಿದಂತೆ : ಸನ್‌ರೈಸರ್ಸ್ ಹೈದರಾಬಾದ್ (34 ಕೋಟಿ ರೂ.), ಕೋಲ್ಕತ್ತಾ ನೈಟ್ ರೈಡರ್ಸ್ (ರೂ. 32.7 ಕೋಟಿ), ಚೆನ್ನೈ ಸೂಪರ್ ಕಿಂಗ್ಸ್ (ರೂ. 31.4 ಕೋಟಿ), ಪಂಜಾಬ್ ಕಿಂಗ್ಸ್ (ರೂ. 29.1 ಕೋಟಿ), ಡೆಲ್ಲಿ ಕ್ಯಾಪಿಟಲ್ಸ್ (ರೂ. 28.95 ಕೋಟಿ) , ರಾಯಲ್ ಚಾಲೆಂಜರ್ಸ್ ಬೆಂಗಳೂರು
(ರೂ. 23.25 ಕೋಟಿ), ಮುಂಬೈ ಇಂಡಿಯನ್ಸ್ (ರೂ. 17.75 ಕೋಟಿ), ರಾಜಸ್ಥಾನ್ ರಾಯಲ್ಸ್ (ರೂ. 14.5 ಕೋಟಿ), ಮತ್ತು ಲಕ್ನೋ ಸೂಪರ್ ಜೈಂಟ್ಸ್ (ರೂ. 13.15 ಕೋಟಿ) ಹೊಂದಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ವನಿಂದು ಹಸರಂಗ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೆಚ್ಚಿನ ಪೈಪೋಟಿ ನಡೆಯಲಿದೆ.
ಪ್ರತಿ ತಂಡವು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಬಹುದು, ಎಂಟು ವಿದೇಶಿ ಆಟಗಾರರು ಮಾತ್ರ ತಂಡದಲ್ಲಿ ಇರಬೇಕು, ತಂಡದಲ್ಲಿ ಕನಿಷ್ಠ ಆಟಗಾರರ ಸಂಖ್ಯೆ 18 ಆಗಿರಬೇಕು. 77 ಆಟಗಾರರ ಸ್ಥಾನ ಖಾಲಿ ಇದ್ದು ಇದರಲ್ಲಿ 30 ವಿದೇಶಿ ಆಟಗಾರರ ಕೋಟಾ ಖಾಲಿ ಇದೆ.














