ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಏಕದಿನ ವಿಶ್ವಕಪ್‌ನ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವನ್ನು ಕರ್ನಾಟಕದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆ ಮೇಲೆ ನೇರ ಪ್ರಸಾರ ಮಾಡುವಂತೆ ರಾಜ್ಯ ಕ್ರೀಡಾ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಗತ್ಯ ಪ್ರಚಾರ ಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ. 140 ಕೋಟಿಗೂ ಅಧಿಕ ಭಾರತೀಯರು ಹಾಗೂ ಕೋಟ್ಯಂತರ ಜಾಗತಿಕ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. 13ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಅಂತಿಮ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು(ಭಾನುವಾರ) ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಪಂದ್ಯದ ಟಾಸ್ ಆದ 5 ನಿಮಿಷದಲ್ಲಿ ಅಂದರೆ 1.35ರಿಂದ 1.50ರ ವರೆಗೆ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಲಿದೆ.
ಪಂದ್ಯದ ಮೊದಲ ಇನ್ನಿಂಗ್ಸ್ ನ ಡ್ರಿಂಕ್ಸ್ ಬ್ರೇಕ್ ವೇಳೆ ಆದಿತ್ಯ ಗದ್ವಿ ಅವರಿಂದ ಗಾಯನ ಪ್ರದರ್ಶನ ನಡೆಯಲಿದೆ. ಮೊದಲ ಇನ್ನಿಂಗ್ಸ್ ಮುಗಿದ ಬಳಿಕ ಸಿಗುವ ಸುಮಾರು 30 ನಿಮಿಷಗಳ
ಸಮಯದಲ್ಲಿ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಅಕಾಸ ಸಿಂಗ್ ಮತ್ತು ತುಷಾರ್ ಜೋಶಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಇರಲಿದೆ.
ಫೈನಲ್ ಪಂದ್ಯದ 2ನೇ ಇನ್ನಿಂಗ್ಸ್ ನ ಡ್ರಿಂಗ್ಸ್ ಬ್ರೇಕ್ ವೇಳೆ ವಿಶಿಷ್ಠ ಶೈಲಿಯ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.














