Coastal Bulletin

ಟೆನಿಸ್ ದಿಗ್ಗಜ ರೋಜರ್ ಫೆಡರರ್ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಸೆರೆನಾ ವಿಲಿಯಮ್ಸ್ ನಿವೃತ್ತಿಯ ಶಾಕ್​ನಿಂದ ಇನ್ನೂ ಸಂಪೂರ್ಣವಾಗಿ ಹೊರಬರದ ಟೆನಿಸ್ ಅಭಿಮಾನಿಗಳಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.

ಪುರುಷರ ಟೆನಿಸ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್  ತಮ್ಮ ವೃತ್ತಿಪರ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ವಾರದ ಲೇವರ್ ಕಪ್ ತನ್ನ ವೃತ್ತಿಜೀವನದ ಕೊನೆಯ ಎಟಿಪಿ ಪಂದ್ಯಾವಳಿಯಾಗಿದ್ದು, ಅದರ ನಂತರ ಯಾವುದೇ ಗ್ರ್ಯಾಂಡ್ ಸ್ಲಾಮ್  ಅಥವಾ ಟೂರ್ ಈವೆಂಟ್‌ಗಳಲ್ಲಿ ಭಾಗವಹಿಸುವುದಿಲ್ಲ ಎಂದು ಫೆಡರರ್ ಹೇಳಿಕೊಂಡಿದ್ದಾರೆ. ಲೇವರ್ ಕಪ್ ಮುಂದಿನ ವಾರ ಲಂಡನ್‌ನಲ್ಲಿ ಸೆಪ್ಟೆಂಬರ್ 23 ರಿಂದ 25 ರವರೆಗೆ ನಡೆಯಲಿದೆ.

ಟೆನಿಸ್ ಜಗತ್ತಿನ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದ ಸ್ವಿಸ್ ಸೂಪರ್‌ಸ್ಟಾರ್ ತನ್ನ ಎರಡು ದಶಕಗಳ ವೃತ್ತಿಪರ ವೃತ್ತಿಜೀವನದಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಅಲ್ಲದೆ ಈ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಪುರುಷ ಆಟಗಾರ ಎನಿಸಿಕೊಂಡಿದ್ದರು. ಜೊತೆಗೆ ಫೆಡರರ್​ಗೂ ಮುನ್ನ ಅತ್ಯಧಿಕ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದ ಪೀಟ್ ಸಾಂಪ್ರಾಸ್

ಅವರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ರೋಜರ್ ಇತಿಹಾಸವನ್ನು ಸೃಷ್ಟಿಸಿದ್ದರು. ಫೆಡರರ್ ತನ್ನ ವೃತ್ತಿಜೀವನದಲ್ಲಿ ಒಟ್ಟು 103 ಎಟಿಪಿ ಈವೆಂಟ್‌ಗಳನ್ನು ಗೆಲ್ಲುವ ಮೂಲಕ ಜಿಮ್ಮಿ ಕಾನರ್ಸ್ (109) ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡರು.

ಫೆಡರರ್ ಅವರು ತಮ್ಮ ಅಭಿಮಾನಿಗಳಿಗೆ ವೀಡಿಯೊ ಮತ್ತು ನಾಲ್ಕು ಪುಟಗಳ ಭಾವನಾತ್ಮಕ ಹೇಳಿಕೆಯೊಂದಿಗೆ ನಿವೃತ್ತಿ ಘೋಷಿಸಿದ್ದಾರೆ. ನಿರಂತರ ಗಾಯ, ಫಿಟ್‌ನೆಸ್ ಮತ್ತು ವಯಸ್ಸು ತನ್ನ ಈ ನಿರ್ಧಾರದ ಹಿಂದಿನ ಕಾರಣ ಎಂಬುದನ್ನು ರೋಜರ್ ಉಲ್ಲೇಖಿಸಿದ್ದಾರೆ. “ನನಗೆ ಈಗ 41 ವರ್ಷ ವಯಸ್ಸಾಗಿದ್ದು, ನಾನು 24 ವರ್ಷಗಳ ವೃತ್ತಿಜೀವನದಲ್ಲಿ 1500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ಆಟವನ್ನು ನಾನು ಯಾವಾಗಲೂ ನನ್ನ ನಿರೀಕ್ಷೆಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದೆ. ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಒಪ್ಪಿಕೊಳ್ಳಬೇಕು ಎಂದು ಫೆಡರರ್ ಹೇಳಿಕೊಂಡಿದ್ದಾರೆ.

Leave a Comment