Coastal Bulletin

ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿದ್ದ ಶ್ರೀಲಂಕಾದ ಲಸಿತ್ ಮಲಿಂಗಾ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

2014ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್​ ಗೆದ್ದ ತಂಡದ ಕ್ಯಾಪ್ಟನ್​ ಆಗಿದ್ದ ಲಸಿತ್ ಮಲಿಂಗಾ, ಎಲ್ಲ ಮಾದರಿ ಕ್ರಿಕೆಟ್​ನಿಂದ 546 ವಿಕೆಟ್ ಪಡೆದುಕೊಂಡಿದ್ದಾರೆ. 2007ರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಐಸಿಸಿ ಕ್ರಿಕೆಟ್​ ವಿಶ್ವಕಪ್​​ನಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು, ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದರು.

38 ವರ್ಷದ ಮಲಿಂಗಾ 2011ರಲ್ಲಿ ಟೆಸ್ಟ್​ ಕ್ರಿಕೆಟ್​ ಹಾಗೂ 2019ರಲ್ಲಿ ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದರು. ಆದರೆ ಸದ್ಯ ಟಿ-20 ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆದಿದ್ದ ವೇಗದ ಬೌಲರ್​ ಇದೀಗ ಅದರಿಂದಲೂ ವಿದಾಯ ಪಡೆದುಕೊಂಡಿದ್ದಾರೆ. ಈ ಮೂಲಕ ಸುಮಾರು 17 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕಿಗೆ ಪೂರ್ಣ ವಿರಾಮ ನೀಡಿದ್ದಾರೆ.

ಮಲಿಂಗಾ ಹೊಂದಿರುವ ಯೂಟ್ಯೂಬ್​ ಚಾನಲ್ ಮೂಲಕ ನಿವೃತ್ತಿ ಘೋಷಣೆ ಮಾಡಿರುವ

ಅವರು, 17 ವರ್ಷಗಳಲ್ಲಿ ಗಳಿಸಿರುವ ಅನುಭವ ಇನ್ಮುಂದೆ ಅಗತ್ಯವಿಲ್ಲ. ಏಕೆಂದರೆ ನಾನು ಟಿ-20 ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದೇನೆ. ಆದರೆ ಕ್ರಿಕೆಟ್​​​ ಚೈತನ್ಯ ಹೆಚ್ಚಿಸಲು ಬೆಳೆಯುತ್ತಿರುವ ಯುವ ಪೀಳಿಗೆಗೆ ಯಾವಾಗಲೂ ಬೆಂಬಲ ನೀಡುತ್ತೇನೆ. ಕ್ರಿಕೆಟ್​ ಪ್ರೀತಿಸುವ ಪ್ರತಿಯೊಬ್ಬರೊಂದಿಗೆ ನಾನು ಇರುತ್ತೇನೆ ಎಂದಿದ್ದಾರೆ.

೩0 ಟೆಸ್ಟ್​​ ಪಂದ್ಯಗಳಿಂದ 101 ವಿಕೆಟ್​, 226 ಏಕದಿನ ಪಂದ್ಯಗಳಿಂದ 338 ವಿಕೆಟ್​, 84 ಟಿ20 ಪಂದ್ಯಗಳಿಂದ 107 ವಿಕೆಟ್ ಪಡೆದುಕೊಂಡಿರುವ ಇವರು, ಐಪಿಎಲ್​ನಲ್ಲೂ ಮಿಂಚು ಹರಿಸಿದ್ದಾರೆ.

2009ರಿಂದ 2019ರವರೆಗಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಆಡಿರುವ 122 ಪಂದ್ಯಗಳಿಂದ 170 ವಿಕೆಟ್​​ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಸುಮಾರು 12 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್​ ತಂಡದ ಭಾಗವಾಗಿದ್ದ ಮಲಿಂಗಾ ಅನೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

Leave a Comment