ಕೇರಳದ ವಯನಾಡು ಜಿಲ್ಲೆಯ ಸರಣಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆ.

Coastal Bulletin
ಕೇರಳದ ವಯನಾಡು ಜಿಲ್ಲೆಯ ಸರಣಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆ.

ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಇನ್ನೂ ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

‍ಭೀಕರ ದುರಂತದಿಂದಾಗಿ ಜಿಲ್ಲೆಯ ಮೇಪ್ಪಾಡಿ ಪಟ್ಟಣ ವ್ಯಾಪ್ತಿಯ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ ಹಾಗೂ ಸಮೀಪದ ನೂಲ್ಪುಳ ಗ್ರಾಮಗಳು ಅಕ್ಷರಶಃ ಕೊಚ್ಚಿಹೋಗಿವೆ. ಘಟನೆಯಲ್ಲಿ 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಬಳಿಯ ಪೋತುಕಲ್‌ನಲ 40 ಕಿ.ಮೀ ದೂರದಲ್ಲಿ ಮಕ್ಕಳು ಸೇರಿದಂತೆ ಮಹಿಳೆಯರು, ವೃದ್ಧರ ಅನೇಕ ಶವಗಳು ಪತ್ತೆಯಾಗಿವೆ. ಮೃತದೇಹಗಳು ಛಿದ್ರ ಛಿದ್ರವಾಗಿದ್ದು, ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಪ್ಪಾಡಿ ಭಾಗದಲ್ಲಿ ಕಳೆದೆರಡು ದಿನಗಳಿಂದ 200 ಮಿ.ಮೀ ವರೆಗೆ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪೀಡಿತರನ್ನು ಜಿಲ್ಲಾಡಳಿತ

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದೆ. 2019ರ ಆಗಸ್ಟ್‌ನಲ್ಲಿ ಮೇಪ್ಪಾಡಿ ಭಾಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 17 ಮಂದಿ ಸಾವಿಗೀಡಾಗಿದ್ದರು.


ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಘೋರ ಗುಡ್ಡ ಕುಸಿತದಲ್ಲಿ ಚಾಮರಾಜನಗರ  ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ. 50 ವರ್ಷದ ರಾಜೇಂದ್ರ, 45 ವರ್ಷದ ರತ್ನಮ್ಮ, 62 ವರ್ಷದ ಪುಟ್ಟಸಿದ್ದಶೆಟ್ಟಿ ಮತ್ತು 50 ವರ್ಷದ ರಾಣಿ ಎಂಬವರು ಸಾವನಪ್ಪಿದ್ದಾರೆ. ಇವರೆಲ್ಲರೂ ಚಾಮರಾಜನಗರ ಜಿಲ್ಲೆಯವರು. ರಾಜೇಂದ್ರ ಮತ್ತು ರತ್ನಮ್ಮ ದಂಪತಿ ಮೂಲತಃ ಚಾಮರಾಜನಗರ ತಾಲೂಕಿನ ಇರಸವಾಡಿ ನಿವಾಸಿಗಳಾಗಿದ್ದು, ವಯನಾಡಿನ ಚೂರಲ್ ​ಮಲೈನಲ್ಲಿ ವಾಸವಾಗಿದ್ದರು.

Leave a Comment