ಚೆನ್ನೈ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಭೀಕರ ಕಾಲ್ತುಳಿತ (TVK Vijay Rally Stampede) ಸಂಭವಿಸಿ 11 ಜನ ಉಸಿರು ಚೆಲ್ಲಿದ್ದರು. ಸಂಭ್ರಮದಲ್ಲಿ ಸೂತಕದ ಕರಿಛಾಯೆ ಆವರಿಸಿತ್ತು. ಕಾಲ್ತುಳಿತ ದುರಂತದಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ದುರಂತ ಮಾಸುವೇ ಮುನ್ನವೇ ನೆರೆಯ ತಮಿಳುನಾಡಿನಲ್ಲಿ (Tamil Nadu) ಭೀಕರ ಕಾಲ್ತುಳಿತ ಸಂಭವಿಸಿದ್ದು, ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಅಲ್ಲದೇ ಇನ್ನೂ ಒಬ್ಬರ ಸ್ಥಿತಿ ಗಂಭೀರವಾಗಿದ್ದು, 48 ಮಂಸಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡು ಕರೂರಿನಲ್ಲಿ (Karur) ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ (Thalapathy Vijay) ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ಕಾಲ್ತುಳಿತ ದುರಂತ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
6 ಗಂಟೆಗೂ ಹೆಚ್ಚು ಕಾಲ ಕಾದು ಕುಳಿತಿದ್ದ ಬೆಂಬಲಿಗರು
ಕಾಲಿವುಡ್ ಸೂಪರ್ ಸ್ಟಾರ್ ಕಮ್ ರಾಜಕಾರಣಿ ದಳಪತಿ ವಿಜಯ್ ತಮಿಳುನಾಡಿನ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರೂರಿನಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿ ಹಮ್ಮಿಕೊಂಡಿದ್ದರು. ವಿಜಯ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿನಮಾನಿಗಳು, ಬೆಂಬಲಿಗರು ಸೇರಿದ್ದರು. ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದ್ರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು.
ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಿಜಯ್ ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸುಸ್ತಿನಿಂದ ಬಳಲುತ್ತಿದ್ದರು. ಇನ್ನು ಇದೇ ವೇಳೆ 9 ವರ್ಷದ ಬಾಲಕಿ ಕಳೆದು ಹೋಗಿರ್ತಾಳೆ. ಆಗ ವಿಜಯ್ ಮೈಕ್ ಮೂಲಕ ಪೊಲೀಸರಿಗೆ ಮನವಿ ಮಾಡ್ತಾರೆ. ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಲೇ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಉಸಿರಾಟದ ತೊಂದರೆ ಅನುಭವಿಸಿದ ಜನರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅಂದ್ಹಾಗೆ ರ‍್ಯಾಲಿ ತಡವಾಗಿ ಸಂಜೆ ಆರಂಭವಾಗಿತ್ತು. ಹೀಗಾಗಿ ವಿಜಯ್ ನೋಡಲು ಫ್ಯಾನ್ಸ್ ಮುಗಿ
ಬಿದ್ದಿದ್ರು. ಅಲ್ದೆ ರ‍್ಯಾಲಿ ವೇಳೆ ಕರೆಂಟ್ ತೆಗೆದಿದ್ದರಿಂದ ದುರಂತ ಸಂಭವಿಸಿದೆ.
ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ ವಿಜಯ್
ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ತಮ್ಮ ಭಾಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದಂತೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಕೂಡಲೇ ಸ್ಥಳದಿಂದ ಕಾಲ್ತಿತ್ತರು. ಮೊದಲೇ ತಡವಾಗಿ ಆಗಮಿಸಿದ್ದ ವಿಜಯ್, ಸ್ಥಳಕ್ಕೆ ಬರುತ್ತಿದ್ದಂತೆ ತಳ್ಳಾಟ, ನೂಕಾಟ ಹೆಚ್ಚಾಗಿದೆ. ದುರಂತ ಬಳಿಕ ಬ್ಲಾಕ್ ಕಾರ್‌ನಲ್ಲಿ ತಿರುಚ್ಚಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿಜಯ್ ಅಲ್ಲಿಂದ ಚೆನ್ನೈಗೆ ಎಸ್ಕೇಪ್ ಆಗಿದ್ರು.
39 ಮಂದಿ ಸಾವು, 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸ್ಥಳಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. 48 ಮಂದಿ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ, ದುರಂತಕ್ಕೆ ಕಾರಣಗಳನ್ನ ಪಟ್ಟಿ ಮಾಡಿದ್ದೇವೆಂದು ತಿಳಿಸಿದ್ದಾರೆ.
ಇನ್ನೂ ಘಟನೆ ಸಂಬಂಧ ಟಿವಿಕೆ ಸ್ಥಳೀಯ ಕಾರ್ಯದರ್ಶಿ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ















