ಕೋಲ್ಕತ್ತಾ: ಬಂಗಾಳ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತದ ವಿರುದ್ಧದ ಚಾರ್ಜ್‌ಶೀಟ್ ಇದಾಗಿದೆ. ಬಳಿಕ ತಮ್ಮ ಭಾಷಣದಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಮತ್ತು ಸರ್ಕಾರದ ವಿರುದ್ಧ ಕಟು ಟೀಕೆ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, ಇದು ಕೇವಲ ಟಿಎಂಸಿ ವಿರುದ್ಧದ ಚಾರ್ಜ್ ಶೀಟ್ ಅಲ್ಲ, ಇದು ಕೇವಲ ಬಿಜೆಪಿಯ ಚಾರ್ಜ್‌ಶೀಟ್ (BJP ChargeSheet) ಅಲ್ಲ. ಬದಲಾಗಿ ಬಿಜೆಪಿ ಧ್ವನಿ ನೀಡುತ್ತಿರುವ ಬಂಗಾಳದ ಜನರ ಜಾರ್ಜ್ ಶೀಟ್ ಎಂದು ಬಣ್ಣಿಸಿದ್ದಾರೆ.
ʻಭಯ Vs ಭರವಸೆʼ
ಬಂಗಾಳವು ಕಳೆದ 15 ವರ್ಷಗಳಿಂದ ಭಯ, ಭ್ರಷ್ಟಾಚಾರ (Corruption) ಮತ್ತು ತಾರತಮ್ಯದ ರಾಜಕೀಯದಿಂದ ತುಂಬಿಕೊಂಡಿದೆ. ಮುಂಬರುವ ಚುನಾವಣೆಗಳು ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೂ ನಿರ್ಣಾಯಕವಾಗಿದೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ. ದೇಶದ ಭದ್ರತೆ ಕಾಪಾಡಿಕೊಳ್ಳಲು ಮತ್ತು ಅಕ್ರಮ ವಲಸಿಗರನ್ನ ತೆಗೆದುಹಾಕಲು ಚುನಾವಣೆಯಲ್ಲಿ ಗೆಲ್ಲುವುದು ಅಗತ್ಯವಾಗಿದೆ. ಅದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ʻಭಯʼ ಬೇಕಾ ಅಥವಾ ʻಭರವಸೆʼ ಬೇಕಾ ಎಂಬುದನ್ನು ಬಂಗಾಳದ ಜನ ನಿರ್ಧರಿಸಬೇಕು ಎಂದು ಶಾ ಕರೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಸುಳ್ಳು, ಭಯ, ಹಿಂಸಾಚಾರವನ್ನೇ ಆಶ್ರಯಿಸಿಕೊಂಡು ಬರುತ್ತಿದೆ. ಆದ್ರೆ ಯಾವ್ದೇ ಸರ್ಕಾರದ ಅಡಿಪಾಯ ಸಾರ್ವಜನಿಕ ಕಲ್ಯಾಣವಾಗಿರಬೇಕು ಎಂದು ತಿವಿದರು.
ದೀದಿ ವಿರುದ್ಧ ಕಟು ವಾಗ್ದಾಳಿ
ಇನ್ನೂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಮಮತಾ ಬ್ಯಾನರ್ಜಿ ಅವರು ಯಾವಾಗಲೂ ಟ್ರಿಕ್ಸ್ ಕಾರ್ಡ್ ಪ್ಲೇ ಮಾಡ್ತಾರೆ. ಕೆಲವೊಮ್ಮೆ ಅವರಿಗೆ ಕಾಲು ಮುರಿಯುತ್ತೆ, ಕೆಲವೊಮ್ಮೆ ತಲೆಗೆ ಬ್ಯಾಂಡೇಜ್ ಬರುತ್ತೆ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗ್ತಾರೆ, ಚುನಾವಣಾ ಆಯೋಗವನ್ನ ನಿಂದಿಸುತ್ತಾರೆ. ಹೀಗೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ತಿವಿದರು.
ಬಿಜೆಪಿ ಚಾರ್ಜ್‌ಶೀಟ್‌ನಲ್ಲಿರುವ ಆರೋಪಗಳೇನು?
ಈ ಚಾರ್ಜ್‌ಶೀಟ್ ತೃಣಮೂಲ ಕಾಂಗ್ರೆಸ್‌ನ (TMC) 15 ವರ್ಷಗಳ ಕರಾಳ ಕೃತ್ಯಗಳ ಸಂಕಲನವಾಗಿದೆ
ಎಂದು ಅಮಿತ್ ಶಾ ದೂರಿದರು. ಮುಂದುವರಿದು…
• ಬಂಗಾಳವು ಭ್ರಷ್ಟಾಚಾರದ ಪ್ರಯೋಗಾಲಯವಾಗಿದೆ
• ವೈಟ್-ಕಾಲರ್ ಅಪರಾಧಿಗಳು ವ್ಯವಸ್ಥೆಯಲ್ಲಿ ಭಾಗಿಯಾಗಿದ್ದಾರೆ
• ಯೋಜನೆಗಳಿಗೆ ಹಣ ಕಡಿತಗೊಳಿಸಿ, ಅಕ್ರಮ ಮಾಡುವುದು ಸಾಮಾನ್ಯವಾಗಿದೆ
• ಬಂಗಾಳವು ಕೈಗಾರಿಕೆಗಳನ್ನು ಸಮಾಧಿ ಮಾಡಿದೆ
• ನುಸುಳುಕೋರರನ್ನ ರಕ್ಷಿಸಲಾಗುತ್ತಿದೆ, ಓಲೈಕೆ ಎಂಬುದು ಸರ್ಕಾರದ ನೀತಿಯಾಗಿದೆ
• ಕಮ್ಯೂನಿಸ್ಟ್ ಆಡಳಿತವೇ ಇದಕ್ಕಿಂತ ಉತ್ತಮವಾಗಿತ್ತು ಅನ್ನೋ ಅಭಿಪ್ರಾಯಕ್ಕೆ ಜನ ಬಂದಿದ್ದಾರೆ ಅನ್ನೋದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾದ ಆರೋಪ.
ಕಳೆದ 5 ಚುನಾವಣೆಯಲ್ಲಿ ಬಂಗಾಳದಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳು ಮತ್ತು ವೋಟ್ ಶೇರ್ (ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದಂತೆ)
• 2014 ಲೋಕಸಭೆ: 17% ಮತಗಳು, 2 ಸ್ಥಾನಗಳು
• 2016 ವಿಧಾನಸಭೆ: 10% ಮತಗಳು, 3 ಸ್ಥಾನಗಳು
• 2019 ಲೋಕಸಭೆ: 41% ಮತಗಳು, 18 ಸ್ಥಾನಗಳು
• 2021 ವಿಧಾನಸಭೆ: 38% ಮತಗಳು, 77 ಸ್ಥಾನಗಳು
• 2024 ಲೋಕಸಭೆ: 39% ಮತಗಳು, 12 ಸ್ಥಾನಗಳು
ʻಭಯʼದಿಂದ ʻಭರವಸೆʼಯತ್ತ – ಶಾ ಆಶ್ವಾಸನೆಗಳೇನು?
• ಜೀವ ಮತ್ತು ಆಸ್ತಿ ನಷ್ಟದ ಭಯದಿಂದ ಮುಕ್ತ ಸ್ವಾತಂತ್ರ್ಯ
• ಆಸ್ತಿ ಲೂಟಿಯಾಗುವ ಭಯದಿಂದ ವಿಮುಕ್ತಿ
• ಉದ್ಯೋಗ ನಷ್ಟದ ಭಯದಿಂದ ಸ್ವಾತಂತ್ರ್ಯ
• ಮಹಿಳೆಯರ ಸುರಕ್ಷತೆಯ ಭಯದಿಂದ ಸ್ವಾತಂತ್ರ್ಯ
• ಯುವಕರ ಭವಿಷ್ಯದ ಮೇಲೆ ಆವರಿಸಿರುವ ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನ ಸ್ವಾತಂತ್ರ್ಯವನ್ನು ಬಿಜೆಪಿ ಸರ್ಕಾರ ನೀಡುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ.















