ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇಂದು ನ್ಯಾಯಮೂರ್ತಿ ಯುಯು ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.
ಉದಯ್ ಉಮೇಶ್ ಲಲಿತ್ ಅವರ ಇಡೀ ಕುಟುಂಬವೇ ವಕೀಲರು ಮತ್ತು ನ್ಯಾಯಮೂರ್ತಿಗಳ ಕುಟುಂಬವಾಗಿದೆ. ಮಹಾರಾಷ್ಟ್ರದ ಯುಯು ಲಲಿತ್‌ಅವರ ಕುಟುಂಬಕ್ಕೆ 102 ವರ್ಷ. ಅವರ ಅಜ್ಜ ರಂಗನಾಥ್ ಲಲಿತ್ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಸೊಲ್ಲಾಪುರದಲ್ಲಿ ವಕೀಲರಾಗಿದ್ದರು. ಇಂದು ನ್ಯಾಯಮೂರ್ತಿ ಯುಯು ಲಲಿತ್ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಅವರ ಕುಟುಂಬದ 3 ತಲೆಮಾರುಗಳು ಹಾಜರಿದ್ದುದು ವಿಶೇಷವಾಗಿತ್ತು.
ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರ 90 ವರ್ಷದ ತಂದೆ ಉಮೇಶ್ ರಂಗನಾಥ್ ಲಲಿತ್ ಕೂಡ ಇಂದು ಪ್ರಮಾಣವಚನ ಸ್ವೀಕಾರದ ವೇಳೆ ಉಪಸ್ಥಿತರಿದ್ದರು. ಅವರು ತಮ್ಮ ತವರು ರಾಜ್ಯದಲ್ಲಿ ವಕೀಲರಾಗಿ ಸುದೀರ್ಘ
ವೃತ್ತಿಜೀವನದ ನಂತರ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
ನೋಯ್ಡಾದಲ್ಲಿ ಶಾಲೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿ ಯುಯು ಲಲಿತ್ ಅವರ ಪತ್ನಿ ಅಮಿತಾ ಲಲಿತ್ ಮತ್ತು ಅವರ ಇಬ್ಬರು ಪುತ್ರರಾದ ಹರ್ಷದ್ ಮತ್ತು ಶ್ರೀಯಶ್ ಸಹ ಇಂದು ಉಪಸ್ಥಿತರಿದ್ದರು. ಪುತ್ರರಿಬ್ಬರೂ ಇಂಜಿನಿಯರಿಂಗ್ ಓದಿದ್ದರೆ, ಶ್ರೀಯಶ್ ಲಲಿತ್ ಇಂಜಿನಿಯರಿಂಗ್ ನಂತರ ಕಾನೂನು ಅಧ್ಯಯನದತ್ತ ಮುಖ ಮಾಡಿದರು. ಅವರ ಪತ್ನಿ ರವೀನಾ ಕೂಡ ವಕೀಲೆ. ಹರ್ಷದ್ ಲಲಿತ್ ಅವರು ಸಂಶೋಧಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ರಾಧಿಕಾ ಜೊತೆ ಅವರು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ.
2ಜಿ ಸ್ಪೆಕ್ಟ್ರಮ್ ಹಂಚಿಕೆ ಪ್ರಕರಣ ನ್ಯಾಯಮೂರ್ತಿ ಯುಯು ಲಲಿತ್ ನಿಭಾಯಿಸಿದ ಪ್ರಮುಖ ಪ್ರಕರಣಗಳಲ್ಲಿ ಒಂದಾಗಿದೆ. ಆಗಸ್ಟ್ 2014ರಲ್ಲಿ ಅವರನ್ನು ನೇರವಾಗಿ ವಕೀಲ ಸ್ಥಾನದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ಮಾಡಲಾಯಿತು.














