ಸತತ 3 ದಿನ ಬ್ಯಾಂಕ್‌ ಮುಷ್ಕರ – ದೇಶಾದ್ಯಂತ ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಯ?

Coastal Bulletin
ಸತತ 3 ದಿನ ಬ್ಯಾಂಕ್‌ ಮುಷ್ಕರ – ದೇಶಾದ್ಯಂತ ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಯ?

ದೇಶಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗ್ರಾಹಕರಿಗೆ ಮುಂಬರುವ ವಾರ ಭಾರಿ ಶಾಕ್ ಕಾದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಬ್ಯಾಂಕ್ ಯೂನಿಯನ್‌ಗಳು, ಮುಂದಿನ ಸೋಮವಾರದಿಂದ ಮೂರು ದಿನಗಳ ಕಾಲ ಸರಣಿ ಮುಷ್ಕರ (Bank Strike) ನಡೆಸಲು ನಿರ್ಧರಿಸಿವೆ. ಚೆಕ್ ಕ್ಲಿಯರೆನ್ಸ್‌ನಿಂದ ಹಿಡಿದು ನೇರ ನಗದು ವಹಿವಾಟಿನವರೆಗೆ ಹಲವು ಸೇವೆಗಳು ಸ್ತಬ್ಧವಾಗಲಿದ್ದು, ಗ್ರಾಹಕರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ.

ಸತತ ಮೂರು ದಿನಗಳ ಕಾಲ ಮುಷ್ಕರ ನಡೆಯಲಿರುವ ಹಿನ್ನೆಲೆ ಗ್ರಾಹಕರ ಅನೂಕೂಲತೆಗಾಗಿ ಕೇಂದ್ರ ಸರ್ಕಾರ (Central Govt) ಭಾನುವಾರ (ಸೆ.27) ಬ್ಯಾಂಕ್‌ಗಳು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದೆ. ಹೀಗಾಗಿ ನೀವು ಮುಂದಿನ ವಾರ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದಾದರೂ ತುರ್ತು ಕೆಲಸಗಳನ್ನು ಇಟ್ಟುಕೊಂಡಿದ್ದರೆ ಆ ಕೆಲಸವನ್ನು ಭಾನುವಾರ ಮುಗಿಸಿಕೊಂಡು ಬಿಡಿ. ಅಷ್ಟಕ್ಕೂ ಮೂರು ದಿನಗಳ ಕಾಲ ಮುಷ್ಕರ ಕೈಗೊಂಡಿರುವುದು ಏಕೆ? ಏನೆಲ್ಲ ಬಂದ್‌ ಆಗಿರಲಿದೆ? ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ಯಾಂಕ್‌ ಮುಷ್ಕರ ಯಾವಾಗ?

ಸೋಮವಾರದಿಂದ (ಸೆ.28) ಬುಧವಾರದವರೆಗೆ (ಸೆ.30) ಮೂರು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ ನಡೆಯಲಿದೆ. 

ಮುಷ್ಕರಕ್ಕೆ ಕಾರಣ?

ಬ್ಯಾಂಕ್ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸವಿರಬೇಕು ಎಂಬುದು ಈ ಮುಷ್ಕರ ಮುಖ್ಯ ಬೇಡಿಕೆಯಾಗಿದೆ. ಈಗ ಬ್ಯಾಂಕ್‌ಗಳಿಗೆ 2ನೇ ಮತ್ತು 4ನೇ ಶನಿವಾರ ಮಾತ್ರ ರಜೆ ಇರುತ್ತದೆ. ಆದರೆ ಬ್ಯಾಂಕ್‌ ನೌಕರರು ತಿಂಗಳ ಎಲ್ಲ ಶನಿವಾರಗಳೂ ರಜೆ ಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

ಏಳು ಬ್ಯಾಂಕ್ ಒಕ್ಕೂಟಗಳು ಮತ್ತು ಎಂಟು ಲಕ್ಷ ಉದ್ಯೋಗಿಗಳನ್ನು ಒಳಗೊಂಡಿರುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU), ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಒಂದು ವೇಳೆ ಮೂರು ದಿನಗಳ ಮುಷ್ಕರದಲ್ಲಿ ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ. 

ಒಕ್ಕೂಟಗಳು ತಾವು ಬ್ಯಾಂಕಿಂಗ್ ಕ್ಷೇತ್ರದ ಶೇ. 90ರಷ್ಟು ಉದ್ಯೋಗಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿವೆ. 5 ದಿನಗಳ ಕೆಲಸ ಜಾರಿ, ಕೆಲಸ ಆಧರಿಸಿ ಕೊಡುವ ಪ್ರೋತ್ಸಾಹಧನ (PLI) ಯೋಜನೆಯಲ್ಲಿ ಬದಲಾವಣೆ, ಈ ಬಗ್ಗೆ ಮಾತುಕತೆ ಮತ್ತು ಉಳಿದ ಸಮಸ್ಯೆಗಳ ಪರಿಹಾರ. ಈ ನಾಲ್ಕು ಪ್ರಮುಖ ಬೇಡಿಕೆಗಳ ಸುತ್ತ ವಿವಾದ ಸೃಷ್ಟಿಯಾಗಿದೆ. ಬ್ಯಾಂಕ್‌ಗಳ ಒಕ್ಕೂಟ (IBA) ಇದಕ್ಕೆ ಮೊದಲೇ ಒಪ್ಪಿ ಸರ್ಕಾರಕ್ಕೆ ಕಳುಹಿಸಿದ್ದರೂ, ಕಳೆದ ಎರಡು ವರ್ಷಗಳಿಂದ ಇದು ಪರಿಶೀಲನೆಯಲ್ಲಿದೆ. 

ಈಗ ಬ್ಯಾಂಕ್‌ಗಳು 1ನೇ, 3ನೇ ಮತ್ತು 5ನೇ ಶನಿವಾರ ಕೆಲಸ ಮಾಡುತ್ತವೆ. ಎಲ್ಲ ಶನಿವಾರ ರಜೆ ಕೊಟ್ಟರೆ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸ್ವಲ್ಪ ಹೆಚ್ಚು ಸಮಯ ಕೆಲಸ ಮಾಡಲು ತಾವು ಸಿದ್ಧವೆಂದು, ಇದರಿಂದ ಗ್ರಾಹಕರ ಸೇವೆಗೆ ತೊಂದರೆಯಾಗುವುದಿಲ್ಲ ಎಂದು ನೌಕರರು ಹೇಳಿದ್ದಾರೆ. 2024ರ ಮಾರ್ಚ್‌ನಲ್ಲಿ ಇದಕ್ಕೆ ಒಪ್ಪಂದವಾಗಿದ್ದರೂ ಸರ್ಕಾರ ಜಾರಿಗೆ ತಂದಿಲ್ಲ ಎಂದು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಾರಣವೆಂದರೆ ಪ್ರೋತ್ಸಾಹಧನ (PLI). ಸರ್ಕಾರ ತಂದ ಹೊಸ ನಿಯಮದಲ್ಲಿ ದೊಡ್ಡ ಅಧಿಕಾರಿಗಳಿಗೆ ಮಾತ್ರ ಹಣ ಸಿಗಲಿದ್ದು, ಸಣ್ಣ ಅಧಿಕಾರಿಗಳನ್ನು ಕೈಬಿಡಲಾಗಿದೆ ಎಂಬುದು ಇವರ ಆಕ್ಷೇಪ.

ಸೆಪ್ಟೆಂಬರ್ 30 ಬ್ಯಾಂಕ್‌ಗಳ ಅರ್ಧ ವರ್ಷದ ಲೆಕ್ಕ ಮುಗಿಸುವ ಮುಖ್ಯ ದಿನ. ಅಂತಹ ಸಮಯದಲ್ಲಿ ಸತತ ಮೂರು ದಿನ ಮುಷ್ಕರ ನಡೆದರೆ ತೊಂದರೆ ಹೆಚ್ಚು ಎಂದು ಸರ್ಕಾರ ಹೇಳಿದೆ. ಮುಖ್ಯವಾಗಿ ಸರ್ಕಾರಿ ಬ್ಯಾಂಕ್‌ಗಳಲ್ಲಿ ಹಣ ಜಮೆ ಮಾಡುವುದು, ಡ್ರಾ ಮಾಡುವುದು, ಚೆಕ್ ಕ್ಲಿಯರ್ ಮಾಡುವುದು ಮತ್ತು ಖಾತೆಯ ಕೆಲಸಗಳು ನಿಲ್ಲಬಹುದು. ಆದರೆ, ಯುಪಿಐ (Google Pay, PhonePe), ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು

ಎಟಿಎಂಗಳು ಕೆಲಸ ಮಾಡುತ್ತವೆ. ತುರ್ತು ಕೆಲಸವಿದ್ದರೆ ಮೊದಲೇ ಮುಗಿಸಿಕೊಳ್ಳಲು ಮತ್ತು ಆನ್‌ಲೈನ್ ಸೇವೆ ಬಳಸಲು ಬ್ಯಾಂಕ್‌ಗಳು ತಿಳಿಸಿವೆ. ಖಾಸಗಿ ಬ್ಯಾಂಕ್‌ಗಳ ಮೇಲೆ ಇದರ ಪರಿಣಾಮ ಕಡಿಮೆ ಇರುತ್ತದೆ.

ಭಾನುವಾರ ಬ್ಯಾಂಕ್ ತೆರೆಯುವುದು ಯಾಕೆ?

ಸಾಮಾನ್ಯವಾಗಿ ಭಾನುವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆದರೆ ಮುಷ್ಕರಕ್ಕಿಂತ ಮುಂಚಿನ ದಿನವಾದ ಸೆಪ್ಟೆಂಬರ್ 27ರ ಭಾನುವಾರ ಎಲ್ಲಾ ಸರ್ಕಾರಿ ಮತ್ತು ಗ್ರಾಮೀಣ ಬ್ಯಾಂಕ್‌ಗಳು ತೆರೆದಿರುತ್ತವೆ.

ಭಾನುವಾರ ರಜೆ ಇದ್ದು, ನಂತರದ ಮೂರು ದಿನ ಮುಷ್ಕರ ನಡೆದರೆ ಜನರಿಗೆ ಸತತ ಐದು ದಿನ ಬ್ಯಾಂಕ್‌ ಕೆಲಸ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಜನರಿಗೆ ತೊಂದರೆ ಆಗದಿರಲಿ ಎಂದು ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ (RBI) ಭಾನುವಾರ ಬ್ಯಾಂಕ್ ಶಾಖೆಗಳು, ಎಟಿಎಂ ಮತ್ತು ಕಚೇರಿಗಳನ್ನು ತೆರೆಯಲು ಆದೇಶಿಸಿದೆ.

ಸರ್ಕಾರ ಹೇಳೋದೇನು?

ಮುಷ್ಕರ ನಿಲ್ಲಿಸಿ ಮಾತುಕತೆ ಮುಂದುವರಿಸಿ ಎಂದು ಸರ್ಕಾರ ನೌಕರರನ್ನು ಕೇಳಿದೆ. ಎಟಿಎಂಗಳಲ್ಲಿ ಹಣದ ಕೊರತೆ ಆಗದಂತೆ ನೋಡಿಕೊಳ್ಳಲು ಬ್ಯಾಂಕ್‌ಗಳಿಗೆ ಸೂಚಿಸಿದೆ. ಸಂಧಾನ ಸಭೆಯಲ್ಲಿ ಪ್ರೋತ್ಸಾಹಧನ (PLI) ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲು ಒಪ್ಪಿಕೊಳ್ಳಲಾಗಿದೆ. ಆದರೆ 5 ದಿನಗಳ ಕೆಲಸದ ಬೇಡಿಕೆ ಸರ್ಕಾರದ ಪರಿಶೀಲನೆಯಲ್ಲಿದೆ, ಇದಕ್ಕೆ ಇಂತಿಷ್ಟೇ ಸಮಯ ಬೇಕು ಎಂದು ಹೇಳಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಅಲ್ಲದೆ, ನೌಕರರ ಹಿತಕ್ಕಾಗಿ ಸರ್ಕಾರ ಈಗಾಗಲೇ ಹಲವು ಒಳ್ಳೆಯ ಕೆಲಸಗಳನ್ನು ಮಾಡಿದೆ ಎಂದು ಹೇಳಿದೆ. ಸೆಪ್ಟೆಂಬರ್ 28ರೊಳಗೆ ಮಾತುಕತೆ ಸರಿಯಾಗದಿದ್ದರೆ, ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯುವ ಸಾಧ್ಯತೆ ಇದೆ.

ತಿಂಗಳಾಂತ್ಯದಲ್ಲಿ ಮುಷ್ಕರ ನಡೆಯುತ್ತಿರುವುದರಿಂದ ವೇತನ ವಿತರಣೆಯಲ್ಲಿ ವ್ಯತ್ಯಯವಾಗಬಾರದು ಎಂಬ ಉದ್ದೇಶದಿಂದ, ಕೇಂದ್ರ ಸರ್ಕಾರದ ನೌಕರರು, ರಕ್ಷಣಾ ಇಲಾಖೆ, ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಪಿಂಚಣಿದಾರರಿಗೆ ಸೆಪ್ಟೆಂಬರ್ ತಿಂಗಳ ವೇತನ ಮತ್ತು ಪಿಂಚಣಿಯನ್ನು ಸೆಪ್ಟೆಂಬರ್ 25ರಂದೇ ಮುಂಚಿತವಾಗಿ ಜಮೆ ಮಾಡಲು ಹಣಕಾಸು ಸಚಿವಾಲಯ ಆದೇಶಿಸಿದೆ. 

ಮುಷ್ಕರದ ಸಮಯದಲ್ಲಿ ಏನೆಲ್ಲಾ ಲಭ್ಯ?

ಲಭ್ಯವಿರುವ ಸೇವೆಗಳು: ಯುಪಿಐ (UPI), ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ (SBI YONO ಇತ್ಯಾದಿ) ಮತ್ತು ಎಟಿಎಂ (ATM) ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಎಟಿಎಂಗಳಲ್ಲಿ ನಗದು ಕೊರತೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ.

ಬಂದ್‌ ಆಗುವ ಸೇವೆಗಳು: ಬ್ಯಾಂಕ್ ಶಾಖೆಗಳಿಗೆ ಖುದ್ದಾಗಿ ಭೇಟಿ ನೀಡಿ ಮಾಡುವ ಚೆಕ್ ಕ್ಲಿಯರೆನ್ಸ್, ಡಿಡಿ (Demand Draft) ಪಡೆಯುವುದು, ಹೊಸ ಖಾತೆ ತೆರೆಯುವುದು ಹಾಗೂ ಲಾಕರ್ ನಿರ್ವಹಣೆಯಂತಹ ಸಿಬ್ಬಂದಿ ಅವಲಂಬಿತ ಸೇವೆಗಳಿಗೆ ತೀವ್ರ ವ್ಯತ್ಯಯ ಉಂಟಾಗಲಿದೆ.

ಅರ್ಧವಾರ್ಷಿಕ ಲೆಕ್ಕ ಮುಕ್ತಾಯ: ಸೆಪ್ಟೆಂಬರ್ 30 ಬ್ಯಾಂಕುಗಳ ಅರ್ಧವಾರ್ಷಿಕ ಲೆಕ್ಕ ಮುಕ್ತಾಯದ ದಿನವಾಗಿದ್ದು, ಮುಷ್ಕರದಿಂದಾಗಿ ಲೆಕ್ಕಪರಿಶೋಧನೆ ಮತ್ತು ವಹಿವಾಟು ಇತ್ಯರ್ಥದ ಮೇಲೂ ಒತ್ತಡ ಬೀಳುವ ಸಾಧ್ಯತೆಯಿದೆ.

ಮುಷ್ಕರ ನಡೆಸುತ್ತಿರುವ ಒಕ್ಕೂಟಗಳು:

ಈ ಮುಷ್ಕರವನ್ನು ದೇಶದ ಒಟ್ಟು 7 ಪ್ರಮುಖ ಬ್ಯಾಂಕ್ ಒಕ್ಕೂಟಗಳ ಜಂಟಿ ವೇದಿಕೆಯಾದ UFBU (United Forum of Bank Unions) ಮುನ್ನಡೆಸುತ್ತಿದೆ. ಇದರಲ್ಲಿ ಅಧಿಕಾರಿಗಳ ಸಂಘಟನೆಗಳು (AIBOC, AIBOA, INBOC) ಹಾಗೂ ನೌಕರರ ಸಂಘಟನೆಗಳು (AIBEA, NCBE, BEFI, INBEF) ಒಟ್ಟಾಗಿ ಭಾಗವಹಿಸುತ್ತಿದ್ದು, ದೇಶದ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಿಬ್ಬಂದಿಯ ಸುಮಾರು ಶೇ. 90ರಷ್ಟು ಪ್ರಾತಿನಿಧ್ಯವನ್ನು ಹೊಂದಿದೆ.

Leave a Comment