ಆಭರಣ ಪ್ರಿಯರಿಗೆ ಮತ್ತು ಮದುವೆ ಸೀಸನ್ನಲ್ಲಿ ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ! ಗಗನಕ್ಕೇರಿದ್ದ ಚಿನ್ನ(Gold) ಮತ್ತು ಬೆಳ್ಳಿ ದರಗಳು(Silver Price) ಈಗ ಹಠಾತ್ ಕುಸಿತ ಕಂಡಿವೆ. 2026ರ ಗರಿಷ್ಠ ದರಕ್ಕೆ ಹೋಲಿಸಿದರೆ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 65 ಸಾವಿರ ರೂ. ಕಡಿಮೆಯಾಗಿದ್ದರೆ, ಕೆ.ಜಿ. ಬೆಳ್ಳಿ ದರ ಬರೋಬ್ಬರಿ 2.50 ಲಕ್ಷ ರೂಪಾಯಿಯಷ್ಟು ಇಳಿಕೆಯಾಗಿದೆ. ಅಮೆರಿಕದ ಆರ್ಥಿಕ ನೀತಿಗಳಿಂದ ಹಿಡಿದು ಪ್ರಧಾನಿ ಮೋದಿ (Narendra Modi) ಅವರ ಕರೆಯವರೆಗೆ, ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಈ ಮಹಾ ಕುಸಿತಕ್ಕೆ ಕಾರಣವಾದ ಅಂಶಗಳೇನು? ಈಗ ಚಿನ್ನ ಖರೀದಿಸುವುದು ಸೂಕ್ತವೇ ಅಥವಾ ಇನ್ನೂ ಕಾಯಬೇಕೇ? ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.
ಬೆಲೆ ಇಳಿಕೆಗೆ ಕಾರಣ ಏನು?
ಬಡ್ಡಿದರ ಏರಿಕೆಯ ನಿರೀಕ್ಷೆ. ಹಣದುಬ್ಬರವನ್ನು (Inflation) ನಿಯಂತ್ರಿಸಲು ಅಮೆರಿಕದ ಸೆಂಟ್ರಲ್ ಬ್ಯಾಂಕ್ (Federal Reserve) ಡಿಸೆಂಬರ್ ತಿಂಗಳಲ್ಲಿ ಬಡ್ಡಿದರವನ್ನು ಮತ್ತಷ್ಟು ಏರಿಕೆ ಮಾಡಬಹುದು ಎಂಬ ಸುಳಿವು ನೀಡಿದೆ. ಬಡ್ಡಿದರ ಹೆಚ್ಚಾದಾಗ ಚಿನ್ನದಂತಹ ಬಡ್ಡಿ ರಹಿತ ಆಸ್ತಿಗಳ ಮೇಲಿನ ಹೂಡಿಕೆ ಆಕರ್ಷಣೆ ಕಡಿಮೆಯಾಗುತ್ತದೆ.
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದಾಗ, ಅಮೆರಿಕದ ಬ್ಯಾಂಕ್ಗಳು ಮತ್ತು ಬಾಂಡ್ಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಬಡ್ಡಿ (ಲಾಭ) ಸಿಗುತ್ತದೆ. ಹೆಚ್ಚಿನ ಲಾಭ ಪಡೆಯಲು ಪ್ರಪಂಚದಾದ್ಯಂತದ ಹೂಡಿಕೆದಾರರು ತಮ್ಮ ದೇಶದ ಕರೆನ್ಸಿಯನ್ನು ಮಾರಿ ಅಮೆರಿಕನ್ ಡಾಲರ್ ಖರೀದಿಸುತ್ತಾರೆ. ಮಾರುಕಟ್ಟೆಯಲ್ಲಿ ಡಾಲರ್ಗೆ ಬೇಡಿಕೆ ಹೆಚ್ಚಾದಂತೆ ಅದರ ಮೌಲ್ಯವೂ ಏರುತ್ತದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಅಥವಾ ಯುದ್ಧದಂತಹ ಸಂದರ್ಭಗಳಲ್ಲಿ ಹೂಡಿಕೆದಾರರು ಡಾಲರ್ ಅನ್ನು ಅತ್ಯಂತ ಸುರಕ್ಷಿತ ಕರೆನ್ಸಿ ಎಂದು ನಂಬಿ ಅದರಲ್ಲಿ ಹಣ ತೊಡಗಿಸುತ್ತಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಅಮೆರಿಕನ್ ಡಾಲರ್ನಲ್ಲಿಯೇ ವ್ಯಾಪಾರ ಮಾಡಲಾಗುತ್ತದೆ. ಡಾಲರ್ ಮೌಲ್ಯ ಹೆಚ್ಚಾದಾಗ, ಭಾರತ, ಯೂರೋಪ್ ಅಥವಾ ಚೀನಾದಂತಹ ದೇಶಗಳ ಖರೀದಿದಾರರು ತಮ್ಮ ಸ್ಥಳೀಯ ಕರೆನ್ಸಿಯನ್ನು ಡಾಲರ್ಗೆ ಬದಲಾಯಿಸಿಕೊಳ್ಳಲು ಹೆಚ್ಚು ಹಣ ತೆರಬೇಕಾಗುತ್ತದೆ. ಇದರಿಂದ ಅವರಿಗೆ ಚಿನ್ನ-ಬೆಳ್ಳಿ ಖರೀದಿಸುವುದು ದುಬಾರಿಯಾಗಿ, ಜಾಗತಿಕ ಬೇಡಿಕೆ ಕಡಿಮೆಯಾಗುತ್ತದೆ. ಬೇಡಿಕೆ ಕುಸಿದಾಗ ಸಹಜವಾಗಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಯುತ್ತದೆ.
ಅಮೆರಿಕನ್ ಡಾಲರ್ (USD) ಬಲಿಷ್ಠಗೊಳ್ಳುವುದು ಎಂದರೆ ಪ್ರಪಂಚದ ಇತರ ಪ್ರಮುಖ ಕರೆನ್ಸಿಗಳಿಗೆ (ಉದಾಹರಣೆಗೆ ಭಾರತೀಯ ರೂಪಾಯಿ, ಯೂರೋ, ಯೆನ್) ಹೋಲಿಸಿದರೆ ಡಾಲರ್ನ ಖರೀದಿ ಸಾಮರ್ಥ್ಯ ಅಥವಾ ಮೌಲ್ಯ ಹೆಚ್ಚಾಗುವುದು. ಸರಳವಾಗಿ ಹೇಳುವುದಾದರೆ, ಹಿಂದೆ 1 ಡಾಲರ್ ಖರೀದಿಸಲು 83 ರೂ. ನೀಡಬೇಕಾಗಿದ್ದರೆ, ಡಾಲರ್ ಬಲಿಷ್ಠವಾದಾಗ ಅದೇ 1 ಡಾಲರ್ ಖರೀದಿಸಲು 93 ರೂ. ಅಥವಾ 94 ರೂ. ನೀಡಬೇಕಾಗುತ್ತದೆ.
ಅಮೆರಿಕನ್ ಡಾಲರ್ ಮೌಲ್ಯ ಹೆಚ್ಚಾದಾಗ ಸಾಮಾನ್ಯವಾಗಿ ಚಿನ್ನದ ದರ ಇಳಿಕೆಯಾಗುತ್ತದೆ. ಈ ಎರಡರ ನಡುವೆ ವಿರುದ್ಧ ಸಂಬಂಧವಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಅಮೆರಿಕನ್ ಡಾಲರ್ನಲ್ಲಿ ನಿಗದಿಪಡಿಸಲಾಗುತ್ತದೆ. ಡಾಲರ್ ಮೌಲ್ಯ ಹೆಚ್ಚಾದಾಗ, ಭಾರತದ ರೂಪಾಯಿ ಸೇರಿದಂತೆ ಇತರ ದೇಶಗಳ ಕರೆನ್ಸಿ ಹೊಂದಿರುವವರಿಗೆ ಚಿನ್ನ ಖರೀದಿಸುವುದು ದುಬಾರಿಯಾಗುತ್ತದೆ. ಇದರಿಂದ ಜಾಗತಿಕವಾಗಿ ಬೇಡಿಕೆ ಕುಸಿದು ಚಿನ್ನದ ದರ ಇಳಿಯುತ್ತದೆ.
ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದಾಗ ಡಾಲರ್ ಬಲಿಷ್ಠವಾಗುತ್ತದೆ. ಆಗ ಹೂಡಿಕೆದಾರರು ಬಡ್ಡಿ ಬರದ ಚಿನ್ನದ ಬದಲಿಗೆ, ಹೆಚ್ಚಿನ ಬಡ್ಡಿ ನೀಡುವ ಅಮೆರಿಕದ ಬಾಂಡ್ಗಳು ಮತ್ತು ಡಾಲರ್ನಲ್ಲಿ ಹೂಡಿಕೆ ಮಾಡಲು ಒಲವು ತೋರುತ್ತಾರೆ. ಆರ್ಥಿಕ ಅನಿಶ್ಚಿತತೆ ಇದ್ದಾಗ ಜನರು ಚಿನ್ನದ ಮೊರೆ ಹೋಗುತ್ತಾರೆ. ಆದರೆ ಅಮೆರಿಕದ ಆರ್ಥಿಕತೆ ಸದೃಢವಾಗಿ ಡಾಲರ್ ಬಲಿಷ್ಠವಾಗಿದ್ದಾಗ, ಹೂಡಿಕೆದಾರರಿಗೆ ಚಿನ್ನದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಹೆಚ್ಚಿದ ಬಾಂಡ್ ಇಳುವರಿ
ಹೆಚ್ಚಿದ ಬಾಂಡ್ ಇಳುವರಿ (Bond Yields) ಮತ್ತು ಚಿನ್ನದ ಬೆಲೆಯ ನಡುವೆ ವಿರುದ್ಧ ಸಂಬಂಧವಿದೆ. ಅಂದರೆ ಅಮೆರಿಕದ ಸರ್ಕಾರಿ ಬಾಂಡ್ಗಳ (US Treasury Yields) ಇಳುವರಿ ಹೆಚ್ಚಾದಾಗ, ಚಿನ್ನದ ಬೆಲೆ ಸಾಮಾನ್ಯವಾಗಿ ಇಳಿಕೆಯಾಗುತ್ತದೆ.
ಚಿನ್ನವು ಯಾವುದೇ ಬಡ್ಡಿ ಅಥವಾ ಲಾಭಾಂಶವನ್ನು ನೀಡುವುದಿಲ್ಲ. ಆದರೆ ಸರ್ಕಾರಿ ಬಾಂಡ್ಗಳು ನಿಶ್ಚಿತ ಬಡ್ಡಿಯನ್ನು ನೀಡುತ್ತವೆ. ಬಾಂಡ್ ಇಳುವರಿ ಹೆಚ್ಚಾದಾಗ, ಚಿನ್ನವನ್ನು ಹಿಡಿದಿಟ್ಟುಕೊಳ್ಳುವುದರಿಂದ ಹೂಡಿಕೆದಾರರು ಹೆಚ್ಚಿನ ಬಡ್ಡಿ ಗಳಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಡಾಲರ್ಗಳು ಡ್ಗಳು ಸುರಕ್ಷಿತ ಮತ್ತು ಹೆಚ್ಚಿನ ರಿಟರ್ನ್ ನೀಡುವಂತಿದ್ದರೆ, ದೊಡ್ಡ ಹೂಡಿಕೆದಾರರು ಚಿನ್ನದಲ್ಲಿರುವ ಹಣವನ್ನು ಹಿಂಪಡೆದು ಬಾಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಚಿನ್ನಕ್ಕೆ ಬೇಡಿಕೆ ಕುಸಿದು ಬೆಲೆ ಇಳಿಯುತ್ತದೆ.
ಹೆಚ್ಚಿನ ಬಾಂಡ್ ಇಳುವರಿಯು ವಿದೇಶಿ ಹೂಡಿಕೆದಾರರನ್ನು ಅಮೆರಿಕದ ಮಾರುಕಟ್ಟೆಯತ್ತ ಆಕರ್ಷಿಸುತ್ತದೆ. ಇದು ಅಮೆರಿಕನ್ ಡಾಲರ್ ಮೌಲ್ಯವನ್ನು ಹೆಚ್ಚಿಸುತ್ತದೆ, ಪರಿಣಾಮವಾಗಿ ಡಾಲರ್ ಲೆಕ್ಕಾಚಾರದಲ್ಲಿ ಚಿನ್ನದ ಬೆಲೆ ಕಡಿಮೆಯಾಗುತ್ತದೆ.
ಬೆಳ್ಳಿ ದರ ಇಳಿಕೆ ಯಾಕೆ?
ಕೈಗಾರಿಕಾ ಬೇಡಿಕೆ ಕುಸಿತ ಮತ್ತು ಮಾರುಕಟ್ಟೆಯಲ್ಲಿ ಬೆಳ್ಳಿಯ ಪೂರೈಕೆ ಹೆಚ್ಚಾದಾಗ ಬೆಳ್ಳಿಯ ದರ ಇಳಿಕೆಯಾಗುತ್ತದೆ. ಚಿನ್ನಕ್ಕೆ
ಹೋಲಿಸಿದರೆ ಬೆಳ್ಳಿಯು ಅಮೂಲ್ಯ ಲೋಹದ ಜೊತೆಗೆ ಪ್ರಮುಖ ಕೈಗಾರಿಕಾ ಲೋಹವೂ ಆಗಿರುವುದರಿಂದ ಇದರ ಬೆಲೆಯು ಉತ್ಪಾದನಾ ವಲಯದ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಕೈಗಾರಿಕಾ ಬೇಡಿಕೆಯ ಕುಸಿತ
ಆರ್ಥಿಕ ಹಿಂಜರಿತ: ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿದ್ದಾಗ (ವಿಶೇಷವಾಗಿ ಚೀನಾ, ಅಮೆರಿಕ ಮತ್ತು ಯುರೋಪ್ನಂತಹ ದೊಡ್ಡ ಉತ್ಪಾದನಾ ದೇಶಗಳಲ್ಲಿ), ಕಾರ್ಖಾನೆಗಳ ಉತ್ಪಾದನೆ ಕಡಿಮೆಯಾಗಿ ಬೆಳ್ಳಿಯ ಬಳಕೆ ಇಳಿಯುತ್ತದೆ.
ಹಸಿರು ಇಂಧನ ಮತ್ತು ಎಲೆಕ್ಟ್ರಾನಿಕ್ಸ್ ವಲಯ: ಸೌರ ಫಲಕಗಳು (Solar Panels), ಎಲೆಕ್ಟ್ರಿಕ್ ವಾಹನಗಳು (EV) ಮತ್ತು 5G ಉಪಕರಣಗಳ ತಯಾರಿಕೆಯಲ್ಲಿ ಬೆಳ್ಳಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ವಲಯಗಳಲ್ಲಿ ಸಬ್ಸಿಡಿ ಕಡಿತ ಅಥವಾ ಉತ್ಪಾದನೆ ನಿಧಾನವಾದರೆ ಬೆಳ್ಳಿಗೆ ಬೇಡಿಕೆ ಕುಸಿಯುತ್ತದೆ.
ಪರ್ಯಾಯ ಲೋಹಗಳ ಬಳಕೆ: ಬೆಳ್ಳಿಯ ಬೆಲೆ ತೀರಾ ಹೆಚ್ಚಾದಾಗ, ಕಂಪನಿಗಳು ವೆಚ್ಚ ಕಡಿತಕ್ಕಾಗಿ ಬೆಳ್ಳಿಯ ಬದಲಿಗೆ ತಾಮ್ರ (Copper) ಅಥವಾ ಇತರ ಅಗ್ಗದ ಲೋಹಗಳನ್ನು ಬಳಸಲು ಆರಂಭಿಸುತ್ತವೆ.
ಭಾರತದಲ್ಲಿ ದರ ಇಳಿಕೆಯಾಗಿದ್ದು ಯಾಕೆ?
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಾಗ, ಭಾರತಕ್ಕೆ ಆಮದಾಗುವ ಚಿನ್ನದ ವೆಚ್ಚವೂ ಕಡಿಮೆಯಾಗುತ್ತದೆ. ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಬಲಿಷ್ಠವಾದಾಗ, ವಿದೇಶದಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವುದು ಅಗ್ಗವಾಗುತ್ತದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಯುತ್ತದೆ.
ಮದುವೆ ಸೀಸನ್ ಮುಗಿದಾಗ, ಪಿತೃಪಕ್ಷದಂತಹ ಅಶುಭವೆಂದು ಪರಿಗಣಿಸುವ ಸಮಯದಲ್ಲಿ ಅಥವಾ ಚಿನ್ನದ ಬೆಲೆ ತೀರಾ ಏರಿಕೆಯಾಗಿ ಗ್ರಾಹಕರು ಖರೀದಿಯನ್ನು ಮುಂದೂಡಿದಾಗ ಬೇಡಿಕೆ ಕುಸಿದು ದರ ಇಳಿಯುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಥವಾ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿದಾಗ, ಹೂಡಿಕೆದಾರರು ಚಿನ್ನದ ಬದಲಿಗೆ ಬ್ಯಾಂಕ್ ಠೇವಣಿ ಮತ್ತು ಬಾಂಡ್ಗಳತ್ತ ಮುಖ ಮಾಡುವುದರಿಂದ ಚಿನ್ನಕ್ಕೆ ಬೇಡಿಕೆ ತಗ್ಗುತ್ತದೆ.
ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿದಾಗ, ಹೂಡಿಕೆದಾರರು ಮತ್ತು ವ್ಯಾಪಾರಿಗಳು ತಮ್ಮ ಬಳಿಯಿರುವ ಚಿನ್ನವನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದು ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಿ ಬೆಲೆ ಇಳಿಯಲು ಕಾರಣವಾಗುತ್ತದೆ.
ಮೋದಿ ಮನವಿಯೂ ಕಾರಣ:
ಈ ವರ್ಷದ ಮೇ ತಿಂಗಳಲ್ಲಿ ವಿದೇಶಿ ವಿನಿಮಯ ಮೀಸಲು (Forex) ಮೇಲಿನ ಒತ್ತಡ ತಗ್ಗಿಸಲು ಅನಿವಾರ್ಯವಲ್ಲದಿದ್ದರೆ ಒಂದು ವರ್ಷ ಚಿನ್ನ ಖರೀದಿಸದಂತೆ ಪ್ರಧಾನಿ ಮೋದಿ ದೇಶವಾಸಿಗಳಿಗೆ ಮನವಿ ಮಾಡಿದ್ದರು. 2026ರ ನವೆಂಬರ್ 21ರಂದು ಲಖನೌನಲ್ಲಿ ಮಾತನಾಡಿದ ಅವರು, ಜನರು ತಮ್ಮ ಮನವಿಗೆ ಸ್ಪಂದಿಸಿ ಖರೀದಿ ಕಡಿಮೆ ಮಾಡಿದ್ದರಿಂದ ಬೆಲೆ ಇಳಿಕೆಯಾಗಿ ಜನರ ಹಣ ಉಳಿತಾಯವಾಗಿದೆ ಎಂದು ಹೇಳಿದ್ದಾರೆ. ವ್ಯಾಪಾರಸ್ಥರ ಸಂಘಟನೆಯಾದ CTI (Chamber of Trade and Industry) ಕೂಡ ಪ್ರಧಾನಿಯವರ ಸಲಹೆಯಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಭಾರಿ ನಷ್ಟದಿಂದ ಪಾರಾಗಿದ್ದಾರೆ ಎಂದು ಪತ್ರ ಬರೆದು ಧನ್ಯವಾದ ತಿಳಿಸಿದೆ.
ಬೇಡಿಕೆ ಎಷ್ಟು ತಗ್ಗಿದೆ?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ಭಾರತದ(India) ಚಿನ್ನ ಆಮದು(Gold Import) ಸುಮಾರು ಶೇ. 40 ರಷ್ಟು ಕಡಿಮೆಯಾಗಿದೆ. ಈ ಏಳು ತಿಂಗಳ ಅವಧಿಯಲ್ಲಿ ದೇಶವು 24.7 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (CTI) ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಜಾಗತಿಕ ಆರ್ಥಿಕ ಬೆಳವಣಿಗೆಗಳು ಮತ್ತು ದೇಶೀಯ ಬೇಡಿಕೆಯ ಇಳಿಕೆಯಿಂದಾಗಿ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಸದ್ಯ ಗ್ರಾಹಕರಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ದಾಖಲೆಯ ಎತ್ತರದಿಂದ ಕೆಳಗಿಳಿದಿರುವ ಈ ದರಗಳು ಮದುವೆ ಸೀಸನ್ನಲ್ಲಿ ಆಭರಣ ಖರೀದಿಸುವವರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿವೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇನ್ನೂ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ದರದಲ್ಲಿ ಏರಿಳಿತ ಸಹಜ. ಹೀಗಾಗಿ, ಒಂದೇ ಬಾರಿಗೆ ದೊಡ್ಡ ಹೂಡಿಕೆ ಮಾಡುವ ಬದಲು ಮಾರುಕಟ್ಟೆಯ ಚಲನವಲನಗಳನ್ನು ಗಮನಿಸುತ್ತಾ, ಅಗತ್ಯಕ್ಕೆ ತಕ್ಕಂತೆ ಹಂತ ಹಂತವಾಗಿ ಖರೀದಿಸುವುದು ಜಾಣತನದ ನಿರ್ಧಾರವಾಗಲಿದೆ.









