ನವದೆಹಲಿ: ಇಲ್ಲಿನ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥಸಾರಥಿ ಅವರು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ. ಆಗಸ್ಟ್ 4 ರಂದು ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಯು ಸಂಸ್ಥೆಯ ಸಂಚಾಲಕ (ವ್ಯವಸ್ಥಾಪನಾ ಸಮಿತಿಯ ಸದಸ್ಯ) ಆಗಿದ್ದರು. ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆಯುತ್ತಿರುವ 32 ಮಹಿಳಾ ವಿದ್ಯಾರ್ಥಿಗಳ ಪೈಕಿ 17 ಮಂದಿ ಸ್ವಾಮೀಜಿ ವಿರುದ್ಧ ದೂರು ನೀಡಿದ್ದಾರೆ. ಅವರು ನಮ್ಮ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧ್ಯಾಪಕರ ವಿರುದ್ಧವೂ ದೂರು: ವಿದ್ಯಾರ್ಥಿನಿಯರು ಸ್ವಾಮೀಜಿ ಸೇರಿದಂತೆ ಅಧ್ಯಾಪಕರ ವಿರುದ್ಧವೂ ದೂರು ನೀಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಇದರಲ್ಲಿ ಮಹಿಳಾ ಅಧ್ಯಾಪಕರೂ ಇದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಡ ಹೇರಿದ್ದರು ಎಂದು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.ಭಾರತೀಯ ನ್ಯಾಯ ಸಂಹಿತೆಯ ಕಾನೂನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 16 ವಿದ್ಯಾರ್ಥಿನಿಯರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಸ್ವಾಮೀಜಿ ಬಳಸುತ್ತಿದ್ದರು ಎನ್ನಲಾದ 39 ಯುಎನ್ 1 ಸಂಖ್ಯೆಯ ವೋಲ್ವೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆಗಸ್ಟ್ 25 ರಂದು ಆರೋಪಿಯ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಅಂದಿನಿಂದ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶೃಂಗೇರಿ ಶಾರದಾ ಪೀಠದಿಂದ ಪ್ರಕಟಣೆ:
ಸ್ವಾಮಿ ಪಾರ್ಥಸಾರಥಿ ಎಂದು ಹಿಂದೆ ಕರೆಯಲ್ಪಡುತ್ತಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರು ಕಾನೂನುಬಾಹಿರ, ಅನುಚಿತ ಮತ್ತು ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಪೀಠಕ್ಕೆ ವಿರುದ್ಧವಾದ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಪೀಠವು ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದೆ" ಎಂದು ಕರ್ನಾಟಕದ ಶೃಂಗೇರಿ ಶಾರದಾ ಪೀಠ ಪ್ರಕಟಣೆ ಹೊರಡಿಸಿದೆ.
ಸರಸ್ವತಿ ಸ್ವಾಮೀಜಿ ಮಾಡಿದ್ದಾರೆ ಎನ್ನಲಾದ ಕಾನೂನುಬಾಹಿರ ಕೃತ್ಯಗಳ ಬಗ್ಗೆ ಪೀಠವು ಸಂಬಂಧಿತ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದೆ ಎಂದು ಹೇಳಿಕೆಯಲ್ಲಿದೆ.
ಸಂಸ್ಥೆಯನ್ನು ಆಡಳಿತ ಮಂಡಳಿಯ ಮೂಲಕ ನಿರ್ವಹಿಸಲಾಗುತ್ತದೆ. ಇದಕ್ಕೆ ಶಿಕ್ಷಣ ತಜ್ಞ ಡಾ. ಕೃಷ್ಣ ವೆಂಕಟೇಶ್ ಮತ್ತು ಇತರ ಗಣ್ಯ ವ್ಯಕ್ತಿಗಳ ಅಧ್ಯಕ್ಷತೆ ಇದೆ. ವಿದ್ಯಾರ್ಥಿಗಳ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ನಡೆಯುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಾಗದಂತೆ ತಡೆಯಲು ಆಡಳಿತ ಮಂಡಳಿಯು ಸಕ್ರಿಯವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.
ತಲೆಮರೆಸಿಕೊಂಡಿರುವ ಸ್ವಾಮೀಜಿಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿದ್ದು, ಹಲವು ತಂಡಗಳನ್ನು ರಚಿಸಲಾಗಿದೆ. ಅವರು ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಯಲು ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಇರಿಸಲಾಗಿದೆ. ದೆಹಲಿ ಮತ್ತು ನೆರೆಯ ರಾಜ್ಯಗಳಲ್ಲಿ ಅವರ ಅಡಗುತಾಣಗಳ ಮೇಲೆ ತಂಡಗಳು ದಾಳಿ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.















